ಪ್ರಮುಖ ಮುಖ್ಯಾಂಶಗಳು
ಮಂಗಳೂರು: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು 9 ಮತ್ತು 10ನೇ ತರಗತಿಗಳಿಗೂ ಬೋಧನೆ ಮಾಡಬೇಕು ಎಂಬ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ನೇಮಕಾತಿ ನಿಯಮಗಳು- 2013ಕ್ಕೆ 2026ರಲ್ಲಿ ಪ್ರಸ್ತಾಪಿಸಲಾದ ಕರಡು ತಿದ್ದುಪಡಿಯನ್ನು ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪ.ಪೂ. ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ., ರಾಜ್ಯದಲ್ಲಿ ಎಸ್‌ಇಪಿ ಜಾರಿಯ ಹಂತದಲ್ಲಿರುವ ಸಂದರ್ಭದಲ್ಲಿ ಇಂತಹ ತುರ್ತು ನಿಯಮ ಬದಲಾವಣೆಯ ಅಗತ್ಯವಿಲ್ಲ. ಶಿಕ್ಷಣ ತಜ್ಞರು ಹಾಗೂ ಬೋಧಕರ ಸಮಿತಿಯನ್ನು ರಚಿಸಿ, ಸಮಗ್ರ ಚರ್ಚೆಯ ಬಳಿಕವೇ ಈ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ವಿಠಲ್ ಮಾತನಾಡಿ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣದ ಬೋಧನಾ ಕ್ರಮಗಳು ಭಿನ್ನವಾಗಿದ್ದು, ಉಪನ್ಯಾಸಕರನ್ನು ಎರಡೂ ಹಂತಗಳಲ್ಲಿ ಬಳಸುವುದರಿಂದ ಶಿಕ್ಷಣದ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಹೇಳಿದರು.
ಬಡ್ತಿ ಪಡೆದ ಉಪನ್ಯಾಸಕರನ್ನು ಪುನಃ 9 ಮತ್ತು 10ನೇ ತರಗತಿಗಳಿಗೆ ಬೋಧನೆಗೆ ನಿಯೋಜಿಸುವುದು ಬಡ್ತಿಯ ಉದ್ದೇಶವನ್ನೇ ಹಾಳು ಮಾಡುತ್ತದೆ. ಕಾರ್ಯಭಾರ ಸಮತೋಲನದ ಹೆಸರಿನಲ್ಲಿ ಉಪನ್ಯಾಸಕರನ್ನು ವಿವಿಧ ಕಾಲೇಜುಗಳಿಗೆ ನಿಯೋಜಿಸುವುದರಿಂದ ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆಯಾಗಲಿದೆ ಎಂದವರು ಅಭಿಪ್ರಾಯಪಟ್ಟರು.
ಸಂಘದ ಪದಾಧಿಕಾರಿಗಳಾದ ಹರಿಪ್ರಕಾಶ್, ಶೀನಪ್ಪ, ಸಚಿತ್ ಸುವರ್ಣ ಹಾಗೂ ಸೀಮಾ ಅವರು ಸುದ್ದಿಗೋಷ್ಠಿಯಲ್ಲಿದ್ದರು.