ಜಿಲ್ಲೆ

ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ಅಗತ್ಯ

ಉಡುಪಿ: ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಂತ್ರಜ್ಞಾನದ ಕೌಶಲ್ಯ ಬೆಳೆಸಿಕೊಳ್ಳಲು ಶಿಕ್ಷಕರು ಮಾರ್ಗದರ್ಶನ ನೀಡಬೇಕು. ಈ ಕುರಿತು ಸೂಕ್ತ ಅರಿವು ಅಗತ್ಯವಿದೆ. ತಂತ್ರಜ್ಞಾನದ ಕೌಶಲ್ಯವು ಉನ್ನತ ವ್ಯಾಸಂಗ ಮಾಡಲು ಹಾಗೂ ಸಂಶೋಧನೆಗೆ ಬೇಕಾದ ಮಾಹಿತಿ ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಬ್ರಿಗೇಡಿಯರ್​ ಡಾ. ಸುರ್ಜಿತ್​ ಸಿಂಗ್​ ಪಾಬ್ಲಾ ಹೇಳಿದರು.

ಬುಧವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್​ ಎಜ್ಯುಕೇಶನ್​ ಸೊಸೈಟಿ ಆಶ್ರಯದಲ್ಲಿ ಇನ್ಫೋಸಿಸ್​ ಸ್ಟ್ರಿಂಗ್​ಬೋರ್ಡ್​ ಸಹಯೋಗದೊಂದಿಗೆ ಶಾಲೆಯ ಶಿಕ್ಷಕರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರ ಕೂಡ ಪಠ್ಯದಲ್ಲಿ ಮಾಹಿತಿ ತಂತ್ರಜ್ಞಾನದೊಂದಿಗೆ ಕೌಶಲ್ಯ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮಾಹಿತಿ ತಂತ್ರಜ್ಞಾನವು ವ್ಯಾಪಕವಾಗಿ ಬೆಳೆದಿದ್ದು ಅದರ ಸದುಪಯೋಗವನ್ನು ಇಂದಿನ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದರೆ ಶಿಕ್ಷಕರು ಕೂಡ ಪರಿಣತಿಯನ್ನು ಹೊಂದಿರಬೇಕು. ಮಾಹಿತಿ ಸಂವಹನ ತಂತ್ರಜ್ಞಾನ ಕೌಶಲ್ಯದ ಮೂಲಕ ಬೇರೆ ಬೇರೆ ಕ್ಷೇತ್ರಗಳಲ್ಲಿ ದೊರೆಯುವ ಸಂಪನ್ಮೂಲಗಳನ್ನು ಸಂಗ್ರಹಿಸಿ ಸ್ಮರ್ಧಾತ್ಮಕ ಜಗತ್ತಿನಲ್ಲಿ ಬಳಕೆ ಮಾಡಿಕೊಂಡರೆ ಉತ್ತಮ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದ ರಿಜಿಸ್ಟ್ರಾರ್​ ಡಾ. ಅಂಜಯ್ಯ ದೇವಿನೇನಿ, ಕಾರ್ಯಕ್ರಮ ಸಂಯೋಜಕಿ ರಾಜಲಕ್ಷ್ಮೀ ಆನಂದನ್​, ಸಂಪನ್ಮೂಲ ವ್ಯಕ್ತಿಗಳಾದ ಐಶ್ವರ್ಯ ರಾಜೀವ್​, ದೀಪ್ತ ಪದ್ಮನಾಭನ್​ ಉಪಸ್ಥಿತರಿದ್ದರು. ಧರ್ಮಪ್ರಾಂತ್ಯದ ಕೆಥೊಲಿಕ್​ ಎಜ್ಯುಕೇಶನ್​ ಸೊಸೈಟಿ ಕಾರ್ಯದರ್ಶಿ ವಿನ್ಸೆಂಟ್​ ಕ್ರಾಸ್ತಾ, ಸ್ವಾಗತಿಸಿ, ಸಿಂತಿಯಾ ಮಿನೇಜಸ್​ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.