raichur 
ಜಿಲ್ಲೆ

ಮಕ್ಕಳಿಗೆ ಹೂ,ಸಿಹಿ ನೀಡಿ ಬರಮಾಡಿಕೊಂಡ ಶಿಕ್ಷಕರು ಬಿಸಿಯೂಟಕ್ಕೆ ಪಾಯಸ ವಿತರಣೆ

ರಾಯಚೂರು 2025-26 ನೇ ಸಾಲಿಗೆ ಶಾಲಾ ಪ್ರಾರಂಭೊತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸಿಹಿ ಹಂಚುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು.

ಮಕ್ಕಳ ಸ್ವಾಗತಕ್ಕಾಗಿ ತಳಿರು ತೋರಣಗಳಿಂದ ಶಾಲೆಗಳನ್ನು ಸಿಂಗಾರಗೊಳಿಸಲಾಗಿತ್ತು. ಶಾಲೆಗಳಲ್ಲಿ ಹಬ್ಬದ ವಾತಾರಣವಿತ್ತು. ಕಳೆದ ಎರಡು ದಿನಗಳಿಂದ ಶಾಲೆಗೆ ಬರುತ್ತಿರುವ ಶಿಕ್ಷಕ ವೃಂದ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸದಸ್ಯರು ಮಕ್ಕಳಿಗೆ ಸಿಹಿ ತಿನಿಸಿ ಶಾಲೆಗಳಿಗೆ ಬರಮಾಡಿಕೊಂಡರು.

ಆಕ್ಷರ ದಾಸೋಹದಿಂದ ಎಲ್ಲಾ ಶಾಲೆಗಳಿಗೆ ಬಿಸಿಯೂಟ ಪೂರೈಕೆಯಾಗಿದ್ದು, ಹೆಸರುಬೇಳೆ ಪಾಯಸ ಬಡಿಸಲಾಯಿತು. ವಿದ್ಯಾರ್ಥಿಗಳು ಲವಲವಿಕೆಯಿಂದಲೇ ಶಾಲೆಗೆ ಬಂದಿದ್ದಾರೆ. ಕೆಲವು ಕಡೆ ಸ್ಥಳೀಯ ಜನಪ್ರತಿನಿಧಿಗಳು ಬಂದಿದ್ದರು. ಎಲ್ಲಾ ಶಿಕ್ಷಕರು ಸಹ ಹಾಜರಿದ್ದು ಮಕ್ಕಳನ್ನು ಸ್ವಾಗತಿಸಿದರು. ಮೊದಲ ದಿನವೇ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು. ಶಿಕ್ಷಕರು, ಕೆಲ ಶಾಲೆಗಳಲ್ಲಿ ಮಕ್ಕಳ ಜತೆ ಪೋಷಕರೂ ಆಗಮಿಸಿದ್ದರು. ಮಧ್ಯಾಹ್ನದ ಬಿಸಿಯೂಟದಲ್ಲೂ ಸಹಿಯ ಸವಿ ದೊರಕಿತು. ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ಮೇ 31ರಿಂದ ಜೂನ್ 30ರವರೆಗೆ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗಳಿಗೆ ಕರೆತರಲು ಅಭಿಯಾನ ಹಮ್ಮಿಕೊಳ್ಳಲಾಗಿದೆ.

ತಾಲೂಕಿನ ಯಕ್ಲಾಸಪುರ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಳಿರು ತೋರಣ ಕಟ್ಟಿ ಬ್ಯಾಂಡ್ ಬಾರಿಸುವ ಮೂಲಕ ವಿದ್ಯಾರ್ಥಿಗಳಿಗೆ ಚಾಕೊಲೇಟ್, ಹೂ ನೀಡಿ ಸ್ವಾಗತಿಸಿ ಅದ್ದೂರಿಯಾಗಿ ಶಾಲಾ ಪ್ರಾರಂಭೋತ್ಸವ ಮಾಡಲಾಯಿತು.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಶಾಲೆಗಳಲ್ಲೂ ಮುನ್ನೆಚ್ಚರಿಕೆಯ ಅಗತ್ಯವಿದೆ ಆದರೆ ಶಿಕ್ಷಣ ಇಲಾಖೆ ಸದ್ಯಕ್ಕೆ ಯಾವ ಕ್ರಮಕ್ಕೂ ಮುಂದಾಗಿಲ್ಲ. ಮಳೆಗಾಲ ಹಿನ್ನೆಲೆ ವಿದ್ಯಾರ್ಥಿಗಳಿಗೆ ಬಿಸಿ ನೀರರನ್ನು ನೀಡಲಾಗುತ್ತಿದ್ದು, ಜ್ವರ ಕೆಮ್ಮು ನೆಗಡಿಯಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಮಾತ್ರ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆಂದು ಶಿಕ್ಷಕರು ತಿಳಿಸಿದ್ದಾರೆ.