ಮೈಸೂರು: ವಿದ್ಯಾರ್ಥಿಗಳು ಕ್ರಿಯಾಶೀಲ ಗುಣ ಹೊಂದುವಂತೆ ಮಾಡಿ ಅವರಲ್ಲಿ ನಾಯಕತ್ವದ ರೂಪ ನೀಡಬೇಕಾದ ಹೊಣೆಗಾರಿಕೆ ಶಿಕ್ಷಕರಲ್ಲಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ತಿಳಿಸಿದರು.
ಜೆಎಸ್‌ಎಸ್ ಮಹಿಳಾ ಕಾಲೇಜಿನಿಂದ ಸರಸ್ವತಿಪುರಂ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ಶನಿವಾರ ಆಯೋಜಿಸಿದ್ದ ಒಂದು ದಿನದ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಿರಂತರ ಕಲಿಕೆ ಕುರಿತಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಪ್ರೋತ್ಸಾಹಿಸುವ ಮೂಲಕ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಅದಕ್ಕೆ ತಕ್ಕಂತೆ ಶಿಕ್ಷಕರೂ ವಿಷಯಗಳ ಕುರಿತು ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರು ಸಂಪಾದಿಸಿದ ಜ್ಞಾನ ಮತ್ತು ಕೌಶಲಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಆದ್ದರಿಂದ ಶಿಕ್ಷಕರು ಹೊಸ ಶೋಧನೆಗಳ ಕಡೆಗೆ ಗಮನಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಗುಣ ಹೊಂದುವಂತೆ ಮಾಡಿ ಅವರಲ್ಲಿ ನಾಯಕತ್ವದ ರೂಪ ನೀಡಬೇಕಿದೆ. ಶಿಕ್ಷಕರು ನಿರಂತರ ಕಲಿಕೆಯ ಗುಣವನ್ನು ಹೊಂದಿ, ಪರಿಪೂರ್ಣ ವ್ಯಕ್ತಿತ್ವ ವಿಕಾಸವಾಗಬೇಕೆಂದು ಎಂದರು.
ಪೂಜಾ ಭಾಗವತ್ ಮೆಮೋರಿಯಲ್ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ ಮಾತನಾಡಿ, ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಶಿಕ್ಷಕರು ವಿದ್ಯಾರ್ಥಿಗಳ ಕುತೂಹಲ ತಣಿಸುವ ಶಕ್ತಿ ಸಾಮರ್ಥ್ಯ ಗಳಿಸಿ, ನವೀನ ಸಂಶೋಧನೆಗಳಿಗೆ ಶಿಕ್ಷಕರು ಒಳಗೊಳ್ಳಬೇಕಿದೆ ಎಂದರು.
ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ರಾಜೇಂದ್ರ ಶ್ರೀಗಳು ತಮ್ಮ ಬದುಕಿನ ಉದ್ದಕ್ಕೂ ವೃತ್ತಿಪರ ನೈತಿಕತೆ ಸಾಧಿಸಿದ್ದರು. ಜ್ಞಾನವೆಂದರೆ ವ್ಯಕ್ತಿಯನ್ನು ವಿನಯವಂತನಾಗಿಸುವುದು. ಶಿಕ್ಷಕರು ಭಾವನಾತ್ಮಕ ಪರವಶತೆಗೆ ಒಳಪಡಬೇಕಿದೆ ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರೇಚಣ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎಸ್.ನಟರಾಜು ಇದ್ದರು.