ವಿಜಯಪುರ: ಶಿಕ್ಷಕರು ಪಠ್ಯ ಬೋಧನೆಗೆ ಸೀಮಿತವಾಗದೇ ಮಗುವಿನ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಮುಂದಾಗಬೇಕು ಎಂದು ಜಿಪಂ ಸದಸ್ಯ ಕೆ.ಸಿ.ಮಂಜುನಾಥ್ ತಿಳಿಸಿದರು.
ಪಟ್ಟಣದ ಗಂಗಾತಾಯಿ ದೇವಾಲಯ ಆವರಣದಲ್ಲಿ ಗ್ರಾಮಾಂತರ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು, ಅಖಿಲ ಕರ್ನಾಟಕ ಮಿತ್ರ ಸಂಘಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುವಂದನೆ, ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯಬಲ್ಲ ಶಕ್ತಿ ಗುರುವಿಗೆ ಮಾತ್ರ ಇದೆ. ಶಿಕ್ಷಕರು ಶಾಲೆಗಳಲ್ಲಿ ಮಗುವಿನ ಸರ್ವತೋಮುಖ ಪ್ರಗತಿಗೆ ದುಡಿಯುವ ಶಕ್ತಿ ಪಡೆದಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ಅಧ್ಯಕ್ಷ ಕೈವಾರ ಶ್ರೀನಿವಾಸ್ ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ಶಿಕ್ಷಕವೃತ್ತಿ ಪವಿತ್ರವಾದುದ್ದು, ಗುರುಗಳನ್ನು ಗೌರವಿಸುವ ಸಮಾಜವೇ ಶ್ರೇಷ್ಠ ಎಂದರು.
ಭಾರತ ಜನಜಾಗೃತಿ ಸೇನೆ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ದೇಶದ ಭವಿಷ್ಯವಾದ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದರು.
ದೇವನಹಳ್ಳಿ ತಾಲೂಕು ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಜೀವನ ಕಟ್ಟಿಕೊಳ್ಳುವ ವಿಷಯದ ಬೋಧನೆ ಕಡೆಗೂ ಶಿಕ್ಷಕರು ಗಮನ ಹರಿಸಬೇಕು ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ, ಜಿಲ್ಲಾ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಪುನಿತಾ ನಟರಾಜು, ಜಿಲ್ಲಾ ಕಸಾಪ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಎಂ.ಚೌಡೇಗೌಡ, ಜಿಲ್ಲಾ ಕಸಾಪ ಗೌರವಾಧ್ಯಕ್ಷ ತಾವರೆಕೆರೆ ನಾಗರಾಜು, ಹೊಸಕೋಟೆ ತಾಲೂಕು ಅಧ್ಯಕ್ಷ ಬೆಟ್ಟಹಳ್ಳಿ ಗೋಪಿನಾಥ್, ಜಿಲ್ಲಾ ಕಸಾಪ ಕಾರ್ಯದರ್ಶಿ ಎಂ.ಶಿವಕುಮಾರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಗಂಗಾಮತಸ್ಥರ ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್.ಮುನಿರಾಜು ಮತ್ತಿತರರು ಇದ್ದರು.
ಪ್ರಶಸ್ತಿ ಪ್ರದಾನ: ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕರಾಗಿ ಸರ್ಕಾರದಿಂದ ಪ್ರಶಸ್ತಿ ಪಡೆದ ಶಿಕ್ಷಕರರಿಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಮೂರನೇ ರ‌್ಯಾಂಕ್ ಪಡೆದ ಚಿಂತಾಮಣಿಯ ವರ್ಷಿಣಿ, ಯಶ್ಮಿತಾ, ಅಮೂಲ್ಯಾ, ವಿನುತಾ ಸೇರಿ 50ಕ್ಕೂ ಹೆಚ್ಚುಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಿ ಪುರಸ್ಕರಿಸಲಾಯಿತು. ರಂಗನಿರ್ದೇಶಕ ಎಂ.ವಿ.ನಾಯ್ಡು ತಂಡದವರಿಂದ ಕನ್ನಡಗೀತೆಗಳ ಗಾಯನ ನಡೆಯಿತು.