ಮುಂಡರಗಿ ಪಟ್ಟಣದ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಲಕ್ಷ್ಮಿ ಎಸ್., ರವೀಂದ್ರ ರುದ್ರವಾಡಿ, ನಾಗನಗೌಡ ಮೇಟಿ ಅವರಿಗೆ ಮಕ್ಕಳ ಸ್ನೇಹಿ ಶಿಕ್ಷಕ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ. ಆರ್.ಎಲ್.ಪೊಲೀಸ ಪಾಟೀಲ, ಪ್ರೊ. ಶಾಂತಮೂರ್ತಿ ಕುಲಕರ್ಣಿ, ಡಾ.ನಿಂಗು ಸೊಲಗಿ ಇತರರಿದ್ದರು. 
ಜಿಲ್ಲೆ

ಶಿಕ್ಷಕರು ವೃತ್ತಿ, ಪುಸ್ತಕ, ಮಕ್ಕಳನ್ನು ಪ್ರೀತಿಸಬೇಕು

ಮುಂಡರಗಿ: ಗುರುವಿನ ಸ್ಥಾನ ಬಹುದೊಡ್ಡದು. ನಮ್ಮೊಳಗೆ ಜ್ಞಾನ ಪ್ರಕಾಶವಾದರೆ ಮತ್ತೊಬ್ಬರಿಗೆ ಬೆಳಕು ಕೊಡಲು ಸಾಧ್ಯ. ಗುರುಗಳು ಅಧ್ಯಯನಶೀಲರಾಗಿ ಮಕ್ಕಳನ್ನು ಸಹ ಅದೇ ಮಾರ್ಗದಲ್ಲಿ ಮುನ್ನಡೆಸಬೇಕು. ವಿದ್ಯಾರ್ಥಿಗಳನ್ನು ಆದರ್ಶ ವ್ಯಕ್ತಿಗಳನ್ನಾಗಿಸಬೇಕು ಎಂದು ಸಾಹಿತಿ ಪ್ರೊ. ಶಾಂತಮೂರ್ತಿ ಕುಲಕರ್ಣಿ ಹೇಳಿದರು.

ಪಟ್ಟಣದ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನದಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ‘ಮಕ್ಕಳ ಸ್ನೇಹಿ ಶಿಕ್ಷಕ’ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಆರ್.ಎಲ್. ಪೊಲೀಸ ಪಾಟೀಲ ಮಾತನಾಡಿ, ಪಾಲಕರು ಮಕ್ಕಳನ್ನು ಸಂಸ್ಕಾರದಿಂದ ಬೆಳೆಸಬೇಕು. ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ. ಶಿಕ್ಷಕರು ತಮ್ಮ ವೃತ್ತಿಯನ್ನು, ಪುಸ್ತಕಗಳನ್ನು, ಮಕ್ಕಳನ್ನು ಪ್ರೀತಿಸಬೇಕು ಎಂದರು.

ಸಾಹಿತಿ ಡಾ.ನಿಂಗು ಸೊಲಗಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸವಾಗಬೇಕು. ಮಕ್ಕಳ ವಿಶಿಷ್ಟ ಪ್ರತಿಭೆ ಬೆಳಕಿಗೆ ತರುವಂತಾಗಬೇಕು ಎಂದರು.

ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲೆಯ ಸಿರೆಗೆರೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಕ್ಷ್ಮೀ ಎಸ್, ಕಲಬುರಗಿ ಜಿಲ್ಲೆಯ ನಂದಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರವೀಂದ್ರ ರುದ್ರವಾಡಿ ಹಾಗೂ ಗದಗ ಜಿಲ್ಲೆಯ ಕೌಜಗೇರಿಯ ನಾಗನಗೌಡ ಮೇಟಿ ಅವರಿಗೆ ನಗದು ಸಹಿತ ‘ಮಕ್ಕಳ ಸ್ನೇಹಿ ಶಿಕ್ಷಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ವೀಣಾ ಪಾಟೀಲ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಈಶ್ವರಪ್ಪ ಹಂಚಿನಾಳ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ವಿಶ್ವಾಸ ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನುಮರಡ್ಡಿ ಇಟಗಿ ನಿರೂಪಿಸಿದರು. ನಿಂಗರಾಜ ಡಾವಣಗೇರಿ ವಂದಿಸಿದರು.