ಜಿಲ್ಲೆ

ಶಿಕ್ಷಕರು ಪ್ರಾಥಮಿಕ ಹಂತದಲ್ಲೇ ಭದ್ರ ಬುನಾದಿ ಹಾಕಲಿ

ಬಸವರಾಜ ವೀರಪ್ಪ ಗರಗ

ಸಿದ್ದಾಪುರ: ಪ್ರಾಥಮಿಕ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಬುನಾದಿ ಹಾಕಿಕೊಟ್ಟಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ಸಾಧ್ಯವಾಗುತ್ತದೆ. ಅಂತಹ ಉತ್ತಮವಾದ ಶಿಕ್ಷಣವನ್ನು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರು ಮಾಡುತ್ತಿರುವುದರ ಜತೆಗೆ ಅತ್ಯಂತ ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸ್ವಾಗತಾರ್ಹ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಆರ್.ನಾಯ್ಕ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಸಂಘದ ಸರ್ವಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಬಿಇಒ ಎಂ.ಎಚ್. ನಾಯ್ಕ ಮಾತನಾಡಿ, ಉತ್ತಮ ಶೈಕ್ಷಣಿಕ ವ್ಯವಸ್ಥೆಗೆ ಎಲ್ಲರೂ ಕಟಿಬದ್ಧರಾಗಿ ಕರ್ತವ್ಯ ನಿರ್ವಹಿಸುವ ಮೂಲಕ ತಾಲೂಕಿನ ಶೈಕ್ಷಣಿಕ ಸಾಧನೆಯನ್ನು ಉತ್ತಮಗೊಳಿಸಬೇಕು ಎಂದರು.

ಸಂಘದ ಅಧ್ಯಕ್ಷ ಸತೀಶ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಪಟಗಾರ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ರಾಜೇಶ ನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಚೈತನ್ಯಕುಮಾರ ಕೆ.ಎಂ., ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ. ನಾಯ್ಕ, ಪಿಎಂ ಪೋಷಣ ಸಹಾಯಕ ನಿರ್ದೇಶಕ ಉದಯ ಮೇಸ್ತ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕರು, ಶಿಕ್ಷಕರ ಸಾಧಕ ಮಕ್ಕಳನ್ನು ಹಾಗೂ ಸಾಧಕ ಶಿಕ್ಷಕರನ್ನು ಗೌರವಿಸಲಾಯಿತು. ಶಿಕ್ಷಕ ನಾಗರಾಜ ಮಡಿವಾಳ, ನಮೃತಾ ವಿ. ಹಾಗೂ ಕವಿತಾ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ಸಂಘದ ವಾರ್ಷಿಕ ಜಮಾ-ಖರ್ಚು ವಿವರ ಸಲ್ಲಿಸಲಾಯಿತು.ಶಿಕ್ಷಕರೊಂದಿಗೆ ಪ್ರಶ್ನೋತ್ತರ ಮತ್ತು ಸಮಾಲೋಚನೆ ನಡೆಯಿತು.