ಜಿಲ್ಲೆ

ಅತಿಥಿ ಉಪನ್ಯಾಸಕರ ಹೋರಾಟಕ್ಕೆ ನಟ ಚೇತನ್ ಸಾಥ್ ; ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮುಂದುವರಿದ ಧರಣಿ

ತುಮಕೂರು : ಕಳೆದೊಂದು ತಿಂಗಳಿನಿಂದ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಮುಂದುವರಿಸಿದ್ದು, ಮಂಗಳವಾರ ನಟ ಚೇತನ್ ಭಾಗವಹಿಸಿ ಬೆಂಬಲ ಸೂಚಿಸಿದರು.

ಅತಿಥಿ ಉಪನ್ಯಾಸಕರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸುವ ಮೂಲಕ ಪದವಿ ಕಾಲೇಜುಗಳಲ್ಲಿ ಪಾಠ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಚೇತನ್ ಆಗ್ರಹಿಸಿದರು.

ರಾಜ್ಯದ 31 ಜಿಲ್ಲೆಗಳಲ್ಲಿಯೂ ಬೇಡಿಕೆ ಈಡೇರಿಕೆ ಒತ್ತಾಯಿಸಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಅವರಿಂದ ವಿದ್ಯೆ ಕಲಿತ ಎಲ್ಲ ಸುಶಿಕ್ಷಿತರು, ಕಾರ್ಮಿಕರು, ರೈತರು, ಪ್ರಗತಿಪರ ಹೋರಾಟಗಾರು ಭಾಗವಹಿಸಿ ಬೆಂಬಲ ಸೂಚಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.

ಆತಿಥಿ ಉಪನ್ಯಾಸಕರು ನಡೆಸುತ್ತಿರುವ ಈ ಹೋರಾಟ ಕೇವಲ ಇವರಿಗೆ ಮತ್ತು ಇವರ ಕುಟುಂಬಕ್ಕೆ ಸಂಬಂಧಿಸಿದ್ದಲ್ಲ. ಅವರಿಗೆ ಪಾಠ ಕಲಿತ ನಮಗೆಲ್ಲರಿಗೂ ಸಂಬಂಧಿಸಿದ್ದು ಎಂದು ನಾವೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕಿದೆ ಎಂದರು.

ಹೋರಾಟದಿಂದಲೇ ಜಗತ್ತಿನಲ್ಲಿ ಬದಲಾಣೆ ತರಲು ಸಾಧ್ಯ, ಇದಕ್ಕೆ ರಷ್ಯಾಕ್ರಾಂತಿ, ್ರೆಂಚ್ ಕ್ರಾಂತಿಗಳ ಜತೆಗೆ ಇತ್ತೀಚಿನ ರೈತರ ಹೋರಾಟಗಳ ಯಶಸ್ಸುಗಳೇ ನಮಗೆ ಸಾಕ್ಷಿ. ಹಾಗಾಗಿ, ಯಾರು ಹೆದರುವ ಅಗತ್ಯವಿಲ್ಲ, ನಿಮ್ಮೊಂದಿಗೆ ಇಡೀ ಕರ್ನಾಟಕವಿದೆ ಎಂದರು.

ಇಂದು ನಮ್ಮನ್ನಾಳುತ್ತಿರುವುದು ಪಂಚೇಂದ್ರೀಯಗಳನ್ನು ಕಳೆದುಕೊಂಡಿರುವ ಸರ್ಕಾರ ಹಾಗೂ ಕರೊನಾ ಆತಂಕದಿಂದ ಅತಿಥಿ ಉಪನ್ಯಾಸಕರ ಬದುಕು ದುಸ್ಥರವಾಗಿದೆ ಎಂದರು.

ಮನಸ್ಸಿಗೆ ಬಂದಂತೆ ಹೇಳಿಕೆ : ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಧರಣಿ ನಡೆಸುತ್ತಿದ್ದೇವೆ. ಆದರೆ, ಇದುವರೆಗೂ ಸರ್ಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲದಿರುವುದು ಆತಂಕ ಹೆಚ್ಚಿಸಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸನೀಲ್‌ಕುಮಾರ್ ಹೇಳಿದರು.

ರಾಜ್ಯ ಸರ್ಕಾರದ ಸಚಿವರು ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ನೀಡುವ ಮೂಲಕ ಹೋರಾಟವನ್ನು ದಾರಿ ತಪ್ಪಿಸಲು ನೋಡುತ್ತಿದ್ದಾರೆ. ಆದರೆ, ವಿವಿಧ ಸಂಘ, ಸಂಸ್ಥೆಗಳು, ವಿರೋಧಪಕ್ಷಗಳ ಮುಖಂಡರು, ಶಾಸಕರು ನಮಗೆ ಬೆಂಬಲ ನೀಡಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ ಎಂದರು. ಅತಿಥಿ ಉಪನ್ಯಾಸಕರ ಸಂಘದ ಡಾ.ಕುಮಾರಯ್ಯ, ಮಲ್ಲಿಕಾರ್ಜುನಯ್ಯ, ರಂಗಧಾಮಯ್ಯ, ಜಿ.ಕೆ.ನಾಗಣ್ಣ, ಗುಂಡಣ್ಣ, ನರಸಿಂಹಮೂರ್ತಿ, ಸವಿತಾ, ಆಶಾ ಇದ್ದರು.