ತೇರದಾಳ: ವಿಷಯಾಧಾರಿತ ವಸ್ತು ವಿಷಯಗಳು ಮಕ್ಕಳ ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಪಾಠ ಬೋಧನೆ ಮಾಡಿದರೇ ಮಾತ್ರ ಉತ್ತಮ ಫಲಿತಾಂಶ ಸಾಧ್ಯ ಎಂದು ಅಜೀಂ ಪ್ರೇಮಜಿ ಫೌಂಡೇಷನ್ ಸಂಪನ್ಮೂಲ ವ್ಯಕ್ತಿ ಶ್ರೀಶೈಲ ದವಳಟ್ಟಿ ಹೇಳಿದರು.
ಸ್ಥಳೀಯ ಕೆಜಿಎಚ್‌ಪಿಎಸ್ ಶಾಲೆಯಲ್ಲಿ ಸೋಮವಾರ ಅಜೀಂ ಪ್ರೇಮಜಿ ಫೌಂಡೇಷನ್ ಹಾಗೂ ಬೆಂಗಳೂರಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ತೇರದಾಳ ಪೂರ್ವ, ಪಶ್ಚಿಮ ಮತ್ತು ಗೋಲಬಾವಿ ವಲಯಗಳ 6 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ತಂತ್ರಜ್ಞಾನ ಯುಗದಲ್ಲಿ ಪರಿಣಾಮಕಾರಿಯಾಗಿ ಪಾಠ ಬೋಧಿಸಲು ಶಿಕ್ಷಕರು ನಿರಂತರ ಪೂರ್ವಸಿದ್ಧತೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ವಿಷಯ ಪರಿಣಿತ ಶಿಕ್ಷಕರಿಗೆ ಪಾಠ ಬೋಧಿಸಲಾಯಿತು. ಇಂಗ್ಲಿಷ್ ವಿಷಯದ ಕುರಿತು ಬಾಹುಬಲಿ ಪಡಸಲಗಿ, ಕನ್ನಡ ವಿಷಯದ ರಾಮು ಕೊಣ್ಣೂರ, ವಿಜ್ಞಾನ ವಿಷಯದ ಶಿಕ್ಷಕಿ ಮುಕುಂದ, ಗಣಿತ ವಿಷಯದ ಅಶ್ವಿನಿ ಯಬರಟ್ಟಿ ಹಾಗೂ ಸಮಾಜ-ವಿಜ್ಞಾನ ವಿಷಯವನ್ನು ಮಹಾವೀರ ಘೂಳಣ್ಣವರ ಶಿಕ್ಷಕರು ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಶಿಕ್ಷಣ ಸಂಯೋಜಕ ಬಿ.ಎಂ. ಹಳೆಮನಿ ಇತರರಿದ್ದರು.