ಜಿಲ್ಲೆ

ಮಕ್ಳಳ ಬಗ್ಗೆ ಶಿಕ್ಷಕರು ನಿಗಾವಹಿಸಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಮಕ್ಕಳು ನಿತ್ಯ ಶಾಲೆ ಹಾಜರಾಗಬೇಕು, ಜತೆಯಲ್ಲಿ ಸಹಪಾಠಿಗಳನ್ನು ಕರೆದುಕೊಂಡು ಬರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.

ತಾಲೂಕಿನ ಕೊರ‌್ಲಗುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ರಕ್ಷಣೆ, ಬಾಲ್ಯವಿವಾಹ ತಡೆ ಹಾಗೂ ಫೋಕ್ಸೋ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ದೌರ್ಜ್ಯನ್ಯ ಮತ್ತು ಮಾನಸಿಕ-ದೈಹಿಕ ಹಿಂಸೆ ನಡೆಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಕಂಡುಬರುತ್ತಿವೆ. ಹಾಗಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು. ಪಾಲಕರು ಸಹ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಈ ಕುರಿತು ಶಿಕ್ಷಕರು ನಿಗಾವಹಿಸಬೇಕು ಎಂದು ತಿಳಿಸಿದರು.

ಹಿರಿಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಚಂದ್ರಕಾಂತ್ ನಂದಾರೆಡ್ಡಿ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳು ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಮಕ್ಕಳು ನಾಪತ್ತೆ, ಬಾಲಕಾರ್ಮಿಕಗಳಂತ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗುತ್ತಿವೆ. ಮಕ್ಕಳು ಇಂತಹ ಸಂದರ್ಭದಲ್ಲಿ ಪೊಲೀಸ್ ತುರ್ತು ಸಹಾಯವಾಣಿ 112 ಹಾಗೂ ಮಕ್ಕಳ ಸಹಾಯವಾಣಿ 1098 ಗೆ ಸಂಪರ್ಕಿಸುವ ಮೂಲಕ ಸಹಾಯ ಪಡೆಯಬಹುದಾಗಿದೆ ಎಂದರು.

ಬಳಿಕ ಗ್ರಾಪಂ, ಪ್ರಾಥಮಿಕ ಮತ್ತು ಆರೋಗ್ಯ ಕೇಂದ್ರ ಭೇಟಿ ಮಕ್ಕಳ ದಾಖಲಾತಿ ಪರಿಶೀಲಿಸಿದರು.