ಜಿಲ್ಲೆ

ಶಿಕ್ಷಕರ ತವರೂರು ಈ ಚಕ್ಕೆರೆ

ಗಂಗಾಧರ ಬಿ ವಿ

ಸಾಹಿತ್ಯ, ಶೈಕ್ಷಣಿಕ, ರಾಜಕೀಯ ಕ್ಷೇತದಲ್ಲೂ ಹಲವರ ಸಾಧನೆ
ಸಮಾಜಕ್ಕೆ ತನ್ನದೇ ಆದ ಕೊಡುಗೆ

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಬೊಂಬೆನಾಡು ಚನ್ನಪಟ್ಟಣ ತಾಲೂಕಿನ ಹಲವಾರು ಗ್ರಾಮಗಳು ತಮ್ಮದೇ ಆದ ಇತಿಹಾಸ ಹೊಂದಿವೆ. ಆದರೆ, ಈ ಗ್ರಾಮ ಮಾತ್ರ ಶೈಕ್ಷಣಿಕ ಕ್ರಾಂತಿಯ ಮೂಲಕ ಇತಿಹಾಸ ಸೃಷ್ಟಿಸಿದೆ. ಅದುವೇ ಶಿಕ್ಷಕರ ತವರೂರು ಎಂದು ಕರೆಸಿಕೊಳ್ಳುವ ಚಕ್ಕೆರೆ ಗ್ರಾಮ.

ಚನ್ನಪಟ್ಟಣ ನಗರದಿಂದ 10 ಕಿಮೀ ದೂರವಿರುವ ಚಕ್ಕೆರೆ ಗ್ರಾಮ ತಾಲೂಕಿನ ವಿಶೇಷ ಗ್ರಾಮಗಳಲ್ಲಿ ಒಂದು. ಈ ಗ್ರಾಮದಲ್ಲಿ ಅತಿಹೆಚ್ಚು ಶಿಕ್ಷಕರಿದ್ದು, ಸಮಾಜಕ್ಕೆ ತನ್ನದೇ ಆದ ಸಾಕಷ್ಟು ಕೊಡುಗೆಯನ್ನು ನೀಡಿದೆ. ಈ ಗ್ರಾಮದಲ್ಲಿ ಹುಟ್ಟಿದ ಅನೇಕರು ಶಿಕ್ಷಕರಾಗಿ, ಅಧ್ಯಾಪಕರಾಗಿ, ಪೊಫೆಸರ್​ಗಳಾಗಿ, ರಾಜ್ಯ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಾಗಿ ಹಾಗೂ ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿ ಕರುನಾಡಿನಲ್ಲಿ ಮೆರೆದಿದ್ದಾರೆ. ಜತೆಗೆ ರಾಜಕೀಯವಾಗಿಯೂ ಛಾಪು ಮೂಡಿಸಿದ್ದಾರೆ.

ಶಿಕ್ಷಿತರ ಗ್ರಾಮ!

560 ಮನೆ ಹಾಗೂ 2700 ಜನಸಂಖ್ಯೆ ಹೊಂದಿರುವ ಈ ಗ್ರಾಮ ಈ ಹಿಂದೆ ಸಾಮಾನ್ಯ ಗ್ರಾಮವಾಗಿತ್ತು. ಚಿಕ್ಕ ಕೆರೆಯ ಪಕ್ಕ ಗ್ರಾಮ ಇದ್ದ ಕಾರಣ ಗ್ರಾಮಕ್ಕೆ ಚಕ್ಕೆರೆ ಎಂಬ ಹೆಸರು ಬಂತು ಎನ್ನಲಾಗುತ್ತದೆ. ಸುತ್ತಮುತ್ತ ಕಲ್ಲುಗಳಿಂದ ಆವೃತ್ತವಾಗಿದ್ದ ಈ ಗ್ರಾಮ ಈ ಹಿಂದೆ ವ್ಯವಸಾಯ ಯೋಗ್ಯ ಭೂಮಿ ಹಾಗೂ ನೀರಾವರಿ ಸೌಲಭ್ಯದ ಕೊರತೆ ಎದುರಿಸುತಿತ್ತಂತೆ. ಈ ಸಮಯದಲ್ಲಿ ಗ್ರಾಮದ ಯುವಕರನ್ನು ಕೈಬೀಸಿ ಕರೆದಿದ್ದು ಶಿಕ್ಷಕ ಹುದ್ದೆ. ಎಲ್​ಎಸ್​ (ಲೋಯರ್​ ಸೆಕೆಂಡರಿ) ಪರೀಕ್ಷೆ ಉತ್ತೀರ್ಣಗೊಂಡಿದ್ದ ಹಲವರು ಶಿಕ್ಷಕ ವೃತ್ತಿ ಸೇರಿಕೊಂಡರಂತೆ. ಬದುಕಿಗಾಗಿ ಸೇರಿಕೊಂಡ ಈ ವೃತ್ತಿ ನಂತರ ಹಲವರ ಬದುಕು ಬದಲಾಯಿಸಿರುವುದು ಇತಿಹಾಸ. ಚಕ್ಕೆರೆ ಮೇಷ್ಟ್ರು ಎಂದರೆ ಒಂದು ಬ್ರ್ಯಾಂಡ್​ ಎನ್ನುವಷ್ಟರ ಮಟ್ಟಿಗೆ ಶಿಕ್ಷಣ ಕ್ಷೇತ್ರದಲ್ಲಿ ಈ ಗ್ರಾಮ ಛಾಪು ಮೂಡಿಸಿದೆ.

ಈ ಹಿಂದೆ ಗ್ರಾಮದ ಶೇ.90ರಷ್ಟು ಮಂದಿ ಶಿಕ್ಷಕರೇ ಆಗಿದ್ದರು. ಆದರೆ, ಕಾಲಕಳೆದಂತೆ ಅದು ಕಡಿಮೆಯಾಗುತ್ತ ಬಂದಿದೆ. ಶಿಕ್ಷಕ ವೃತ್ತಿ ಅಲ್ಲದೇ ಹಲವಾರು ವೃತ್ತಿಗಳಲ್ಲಿ ಗ್ರಾಮದ ಜನತೆ ಬದುಕು ಕಟ್ಟಿಕೊಂಡಿದ್ದಾರೆ. ಶಿಕ್ಷಕರಷ್ಟೇ ಅಲ್ಲದೇ ವಿದ್ವಾಂಸರು, ನಾಟಕಕಾರರು ಈ ಗ್ರಾಮದಲ್ಲಿ ಜನಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎನ್ನುತ್ತಾರೆ ಗ್ರಾಮದ ನಿವೃತ್ತ ಅಧ್ಯಾಪಕ ಚನ್ನವಿರೇಗೌಡ.

ದೇಜಗೌ ಹುಟ್ಟೂರು!

ರಾಷ್ಟ್ರಕವಿ ಕುವೆಂಪು ಅವರ ನೆಚ್ಚಿನ ಶಿಷ್ಯ ದೇ.ಜವರೇಗೌಡ ಹುಟ್ಟೂರು ಇದೇ ಚಕ್ಕರೆ ಎಂಬುದು ಹೆಮ್ಮೆಯ ವಿಚಾರ. ದೇಜಗೌ ಎಂಬ ಕಾವ್ಯನಾಮದಿಂದ ಹೆಸರಾಗಿದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಬಾಲ್ಯ ಹಾಗೂ ಪ್ರಾಥಮಿಕ ಶಿಣ ಗ್ರಾಮದಲ್ಲೆ ನಡೆದಿದೆ. ದಿವಂಗತ ದೇ. ಜವರೇಗೌಡರು ಹಾಗೂ ಅವರ ಮಗ ಶಶಿಧರ್​ ಪ್ರಸಾದ್​ ಇಬ್ಬರು ಸಹ ಸಾಂಸ್ಕೃತಿಕ ನಗರಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಇದು ಕೂಡ ವಿಶೇಷ. ಇವರೊಂದಿಗೆ, ಜಾನಪದ ವಿದ್ವಾಂಸರಾದ ಡಾ. ಚಕ್ಕೆರೆ ಶಿವಶಂಕರ್​, ಕನ್ನಡದ ಬೈಗುಳಗಳು ಒಂದು ಸಾಂಸತಿಕ ವಿಶ್ಲೇಷಣೆ ಎಂಬ ವಿಚಾರದ ಬಗ್ಗೆ ಅಧ್ಯಯನ ನಡೆಸಿದ ವಿಶೇಷ ಸಾಹಿತಿ ಪ್ರೊ.ಸಿ.ಪಿ. ನಾಗರಾಜು, ನಿವೃತ್ತ ಪ್ರಾಂಶುಪಾಲರಾಗಿ ಗ್ರಾಮ ಸೇರಿ ಶೈಕ್ಷಣಿಕವಾಗಿ ಅಪಾರ ಕೊಡುಗೆ ನೀಡಿರುವ ಪ್ರೊ. ಮುನಿಗೌಡ ಮತ್ತಿತರರು ಗ್ರಾಮದ ಕೀರ್ತಿಯ ಕಳಸವಾಗಿದ್ದಾರೆ.

ಸಿಪಿವೈ

ಗ್ರಾಮದ ಸಾಮಾನ್ಯ ಶಿಕ್ಷಕರೊಬ್ಬರ ಪುತ್ರನಾಗಿ ಜನಿಸಿ ರಾಜ್ಯ ಸರ್ಕಾರದ ಮಂತ್ರಿಯಾಗುವರೆಗೆ ಬೆಳೆದ ಹಾಗೂ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಾಜಿ ಸಚಿವ, ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್​ ಸಹ ಚಕ್ಕೆರೆ ಮಣ್ಣಿನ ಕೀರ್ತಿ ಬೆಳಗಿಸಿದ್ದಾರೆ. ಸಾಂಸ್ಕೃತಿ ಪ್ರತಿಭೆಗಳು, ಜಾನಪದ ಕಲಾವಿದರೂ, ಕಾರ್ಮಿಕ ನಾಯಕರು ಹೀಗೆ ಎಲ್ಲ ಕ್ಷೇತ್ರದಲ್ಲೂ ಗ್ರಾಮದ ಮಂದಿ ಛಾಪು ಮೂಡಿಸಿದ್ದಾರೆ.

ಗ್ರಾಮದಲ್ಲಿ ಪ್ರಾಥಮಿಕದಿಂದ ಹಿಡಿದು ಪದವಿ ಪೂರ್ವದವರೆಗೂ ಶಾಲಾ ಕಾಲೇಜು ಇದೆ. ಇದರೊಂದಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಯೂ ಗ್ರಾಮದಲ್ಲಿದೆ. ಗ್ರಾಮವಷ್ಟೇ ಅಲ್ಲದೇ ಅಕ್ಕಪಕ್ಕದ ಗ್ರಾಮದ ವಿದ್ಯಾರ್ಥಿಗಳು ಸಹ ಈ ಗ್ರಾಮದಲ್ಲಿ ವ್ಯಾಸಂಗ ನಡೆಸುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತ ಬಂದಿರುವುದೇ ಈ ಗ್ರಾಮದ ವಿಶೇಷ. ಗ್ರಾಮದಲ್ಲಿ ಪ್ರೌಢಶಾಲೆ ತೆರೆಯುವಲ್ಲಿ ಪ್ರೊ. ಮುನಿಗೌಡರ ಪಾತ್ರ ಸಾಕಷ್ಟಿದೆ.

ಶಕ್ತಿದೇವತೆಗಳ ನೆಲೆವೀಡು!

ಶಿಕ್ಷಣವಷ್ಟೇ ಅಲ್ಲದೇ ಧಾರ್ಮಿಕವಾಗಿಯೂ ಈ ಗ್ರಾಮ ಹೆಸರು ಗಳಿಸಿದೆ. ಗ್ರಾಮದಲ್ಲಿ ಹಲವಾರು ಶಕ್ತಿ ದೇವತೆಗಳು ನೆಲೆಸಿದ್ದು, ಅಪಾರವಾದ ಭಕ್ತಗಣವನ್ನು ಹೊಂದಿವೆ. ಚೌಡೇಶ್ವರಿ, ಪಟ್ಟಲದಮ್ಮ, ತಿಬ್ಬಾದೇವಿ, ಯಲ್ಲೆರಪ್ಪ, ನಾರಾಯಣಸ್ವಾಮಿ, ಮಂಟೇಸ್ವಾಮಿ, ಮಹದೇಶ್ವರ ಹೀಗೆ ಹಲವು ದೇಗುಲಗಳು ಗ್ರಾಮದಲ್ಲಿವೆ.

ನಮ್ಮ ತಂದೆ ಕೂಡ ಶಿಕ್ಷಕರಾಗಿದ್ದರು. ನನ್ನ ಗ್ರಾಮದ ಬಗ್ಗೆ ಹೆಮ್ಮೆ ಇದೆ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಶೈಣಿಕವಾಗಿ ಸಾಕಷ್ಟು ಕೊಡುಗೆ ನೀಡಿದೆ. ಸಮಾಜವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು. ಈ ಹಿಂದಿನಿಂದಲೂ ಗ್ರಾಮದ ಹಲವರು ಶಿಕ್ಷಕರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇದು ಮುಂದುವರಿಯಬೇಕು ಎಂಬುದು ನನ್ನ ಆಶಯ.

 ಸಿ.ಪಿ.ಯೋಗೇಶ್ವರ್​, ವಿಧಾನ ಪರಿಷತ್​ ಸದಸ್ಯ

ಗ್ರಾಮದಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಸಾಹಿತಿಗಳು ಸೇರಿ ಅನೇಕರು ಇಂದಿಗೂ ಕರುನಾಡಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇದು ಹೆಮ್ಮೆಯ ವಿಚಾರ. ನಮ್ಮೂರಿನ ಶೈಕ್ಷಣಿಕ ಸ್ಫೂರ್ತಿಯೇ ನಾನು ಸಹ ಒಂದು ವಿದ್ಯಾಸಂಸ್ಥೆ ಕಟ್ಟಲು ಪ್ರೇರೇಪಿಸಿತು. ನಮ್ಮೂರಿನ ಹಿರಿಯರು ಹಾಕಿಕೊಟ್ಟ ಮೇಲ್ಪಂಕ್ತಿಯಿಂದ ನಾವು ಸಹ ರಾಷ್ಟ್ರ ಕಟ್ಟುವಂತಹ ಮಹತ್ವದ ಹೊಣೆಗಾರಿಕೆ ಇರುವ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕವಾಗಿ ಕೆಲಸ ಮಾಡುತ್ತಿದ್ದೇವೆ.

ಚಕ್ಕೆರೆ ವೆಂಕಟರಾಮೇಗೌಡ, ರಾಜ್ಯ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಹಾಗೂ ಶಿಕ್ಷಣ ಸಂಸ್ಥೆ ನಿರ್ಮಾತೃ