ಜಿಲ್ಲೆ

ಶಿಕ್ಷಕರ ಮೇಲಿದೆ ಗುರುತರ ಜವಾಬ್ದಾರಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿಕ್ಷಕರು ಜ್ಞಾನದ ಅನುಭವದಿಂದ ಮಾತ್ರ ಆದರ್ಶ ಸಮಾಜ ಕಟ್ಟಲು ಸಾಧ್ಯ. ಅಂತಹ ಸೃಜನಶೀಲ ಶಿಕ್ಷಕರು ಮಾತ್ರ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ನಿವೃತ್ತ ಡಿಡಿಪಿಐ ಎಂ.ಡಿ. ಬಳ್ಳಾರಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಿಂಗಣ್ಣ ಕುಂಟಿ (ಇಟಗಿ) ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ನಿವೃತ್ತರಾಗಿಯೂ ಕ್ರೀಯಾಶೀಲರಾಗಿರುವ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಹಿಂದಿಗಿಂತಲೂ ಶಿಕ್ಷಕರ ಮೇಲೆ ಜವಾಬ್ದಾರಿ ಹೆಚ್ಚಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ, ಭವಿಷ್ಯದ ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸುವ ಸಾಮರ್ಥ್ಯವನ್ನು ಶಿಕ್ಷಕರು ಬೆಳೆಸಬೇಕಿದೆ. ವಿದ್ಯಾರ್ಥಿಗಳಲ್ಲಿ ಗುಣಾತ್ಮಕತೆ ತರುವಲ್ಲಿ ಶಿಕ್ಷಕರಷ್ಟೇ ಅಲ್ಲ ಪಾಲಕರು ಹಾಗೂ ಸಮಾಜದ್ದು ಮಹತ್ವದ ಪಾತ್ರವಿದೆ. ನಿವೃತ್ತಿ ನಂತರ ಕ್ರೀಯಾಶೀಲರಾದ ಶಿಕ್ಷಕರು ಮಾತ್ರ ಜನಮಾನಸದಲ್ಲಿ ಶಾಶ್ವತವಾಗಿರುತ್ತಾರೆ ಎಂದರು.

ಎ.ಎನ್​. ನಾಗರಳ್ಳಿ ಮಾತನಾಡಿ, ನಿಂಗಣ್ಣ ಕುಂಟಿ ಸೃಜನಶೀಲ ಶಿಕ್ಷಕ, ಮಕ್ಕಳ ಸಾಹಿತಿಗಳಾಗಿ ಕೃಷಿ ಮಾಡಿದವರು. ಅವರ ಜೀವಮಾನದ ಸಾಧನೆಗೆ ಬಡತನ ಅಡ್ಡಿ ಆಗಲಿಲ್ಲ. ಶಿಕ್ಷಕ ವೃತ್ತಿ ಧರ್ಮವನ್ನು ನಿವೃತ್ತಿ ನಂತರವೂ ಕಾಪಾಡಿಕೊಂಡು ಇಂದು 4 ಜನ ನಿವೃತ್ತ ಕ್ರೀಯಾಶೀಲ ಶಿಕ್ಷಕರನ್ನು ಸನ್ಮಾನಿಸಿದ್ದು ಅಭಿನಂದನೀಯ ಎಂದರು.

ಜೆ.ಕೆ. ಜಮಾದಾರ ಮಾತನಾಡಿದರು. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕ್ರೀಯಾಶೀಲ ಶಿಕ್ಷಕರಾದ ಬಸವರಾಜ ಜಗಾಪುರ, ವೀಣಾ ಮೋಡಕ್​, ಸಿ.ಎಸ್​. ಮರಳಿಹಳ್ಳಿ ಅವರಿಗೆ ಸನ್ಮಾನಿಸಲಾಯಿತು.

ನಿಂಗಣ್ಣ ಕುಂಟಿ ದತ್ತಿ ಆಶಯ ಕುರಿತು ಮಾತನಾಡಿದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.