ಆನಂದಪುರ: ವಿದ್ಯಾರ್ಥಿಗಳ ಯಶಸ್ಸಿಗಾಗಿ ಶಿಕ್ಷಕರು ಸದಾ ಶ್ರಮಿಸುತ್ತಾರೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಾಗ ಅತ್ಯಂತ ಸಂತಸ ಪಡುವ ಶಿಕ್ಷಕರು ಎಂದಿಗೂ ವಂದನಾರ್ಹರು ಎಂದು ಶಿವಮೊಗ್ಗ ರೋಟರಿ ಕ್ಲಬ್ ಮಾಜಿ ಗವರ್ನರ್ ಶ್ರೀಧರ ಹೇಳಿದರು. ಮಂಗಳವಾರ ಗೌತಮಪುರದ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಪರಿಶೋಽಸಿ ಬೆಳೆಸುವ ಕಾರ್ಯ ಸಾಮಾನ್ಯವಾದದ್ದಲ್ಲ. ವಿದ್ಯಾರ್ಥಿಗಳ ಮನಸ್ಥಿತಿ ಅರಿತು ನಿರಂತರ ಪ್ರೋತ್ಸಾಹಿಸುವ ಕಾರ್ಯವೇ ಬೋಧನಾ ಕಾರ್ಯ. ಇದಕ್ಕಾಗಿ ಶಿಕ್ಷಕರು ತಮ್ಮ ಬದುಕಿನ ಅಮೂಲ್ಯ ಸಮಯ ವ್ಯಯಿಸಿ ಸಾಧನೆ ಮಾಡುತ್ತಾರೆ ಎಂದರು. ಶಿವಮೊಗ್ಗದ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಎನ್.ಜಿ.ಉಷಾ, ಉದ್ಯಮಿ ಸೂರ್ಯನಾರಾಯಣ ಉಡುಪ, ವಿದ್ಯಾ ಭಾರತಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಎ.ಎಸ್.ನಾಗರತ್ನಾ, ಮುಖ್ಯ ಶಿಕ್ಷಕ ಬಸವರಾಜ, ಶಿಕ್ಷಕರು ಇದ್ದರು.