ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ವಿದ್ಯಾವಿಕಾಸ ಪ್ರಕಲ್ಪದ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರದ ಶಿಕ್ಷಕಿಯರ ಕುಟುಂಬ ಮಿಲನ ಕಾರ್ಯಕ್ರಮವನ್ನು ಭಾನುವಾರ ಕೇಶ್ವಾಪುರ ಬನಶಂಕರಿ ಬಡಾವಣೆಯ ಸೇವಾ ಸದನದಲ್ಲಿ ಆಯೋಜಿಸಲಾಗಿತ್ತು.
ವಿದ್ಯಾವಿಕಾಸ ಪ್ರಕಲ್ಪದ ಅಡಿಯಲ್ಲಿ ಹುಬ್ಬಳ್ಳಿ ಮಹಾನಗರ, ಗ್ರಾಮಾಂತರ, ಕುಂದಗೋಳ ಮತ್ತು ನವಲಗುಂದ ತಾಲೂಕುಗಳ 60 ಸ್ಥಾನಗಳ 72 ಶಿಕ್ಷಕಿಯರು ಹಾಗೂ 68 ಕುಟುಂಬಗಳಿಂದ ಒಟ್ಟು 162 ಜನ ಪರಿವಾರದ ಸದಸ್ಯರು ಭಾಗವಹಿಸಿದ್ದರು.
ವಿದ್ಯಾವಿಕಾಸ ಪ್ರಕಲ್ಪ ಪ್ರಾಂತ ಸಮಿತಿ ಅಧ್ಯಕ್ಷೆ ಭಾರತಿ ನಂದಕುಮಾರ ಮಾತನಾಡಿ, ಸೇವಾ ಚಟುವಟಿಕೆಗಳಲ್ಲಿ ಕುಟುಂಬದ ಸದಸ್ಯರ ಪಾತ್ರ ಮತ್ತು ಸಹಕಾರ ಸಿಕ್ಕಲ್ಲಿ ಮಹಿಳೆ ಮನೆಯನ್ನು ಗೆದ್ದು ಸಮಾಜಕ್ಕೂ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕುಟುಂಬ ಮಿಲನ ಕೇವಲ ಒಂದು ದಿನದ ಚಟುವಟಿಕೆಯಲ್ಲ, ಈ ಕಾರ್ಯಾಗಾರವು ಕುಟುಂಬ ಮತ್ತು ಸಮಾಜದ ಮಧ್ಯ ಸಮತೋಲನ ಸಾಧಿಸುವುದನ್ನು ತಿಳಿಯಪಡಿಸುವುದಾಗಿದೆ ಎಂದರು.
ಶಾಂತಿ ಕುಟೀರ ಆಶ್ರಮ ಕನ್ನೂರು ಶ್ರೀಕೃಷ್ಣ ಸಂಪಗಾವಕರ ಗುರೂಜಿಯವರು ಮಾತನಾಡಿ, ಇಲ್ಲಿರುವ ಪ್ರತಿಯೊಬ್ಬ ಮಹಿಳೆಯೂ ಜೀಜಾಮಾತೆಯ ಸ್ವರೂಪ ಎಂದಾದಲ್ಲಿ ಸಮಾಜಕ್ಕೆ ಶಿವಾಜಿ ಮಹಾರಾಜರಂತಹ ಮಹಾಪುರುಷರನ್ನು ನೀಡಲು ಸಾಧ್ಯ ಎಂದರು.
ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಪೂರ್ಣಚಂದ್ರರಾವ ಘಂಟಸಾಲ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಕುಟುಂಬ ಪ್ರಭೋದನದ ಕಮಲಾ ಮಾತಾಜಿ, ಟ್ರಸ್ಟ್ ಕಾರ್ಯದರ್ಶಿ ರಘೋತ್ತಮ ಅಕಮಂಚಿ, ವಿಶ್ವಸ್ಥ ಭರತ ಜೈನ, ಪ್ರಾಂತ ಸಂಯೋಜಕ ಶಂಕರ ಗುಮಾಸ್ತೆ, ಪ್ರಕಲ್ಪ ಸಮತಿಯ ಕಾರ್ಯದರ್ಶಿ ರಾಚಯ್ಯ ವಾರಿಕಲ್ಮಠ ಅವರು ಉಪಸ್ಥಿತರಿದ್ದರು.
ರತ್ನಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.