ಜಿಲ್ಲೆ

ಎಲೆಕ್ಷನ್‌ಗೆ ಎಂಟ್ರಿಯಾದ ಟೀಚರ್ಸ್‌

ಕೋಲಾರ ಡೆಸ್ಕ್

ಕಿರುವಾರ ಎಸ್.ಸುದರ್ಶನ್ ಕೋಲಾರ
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾವು ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಹಲವು ಮಂದಿ ಶಿಕ್ಷಕರು, ನೆಚ್ಚಿನ ಅಭ್ಯರ್ಥಿ ಪರ ಮತಯಾಸುವ ಮೂಲಕ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದು, ಮುಂದೆ ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಮಾತು ಕೇಳಿಬರುತ್ತಿದೆ.


ಜಿಲ್ಲೆಯಲ್ಲಿ ಒಟ್ಟು 20607 ಶಾಲೆಗಳಿದ್ದು, ಆ ಪೈಕಿ 1922 ಸರ್ಕಾರಿ, 103 ಅನುದಾನಿತ ಹಾಗೂ 513 ಅನುದಾನ ರಹಿತ ಶಾಲೆಗಳು ಇವೆ. ಜೂ.3ರಂದು ನಡೆಯುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲೆಯ 4142 ಶಿಕ್ಷಕರು ಮತದಾನ ಮಾಡಲಿದ್ದಾರೆ.


ಆಗ್ನೇಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಟಿ.ಶ್ರೀನಿವಾಸ್, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸೇರಿ ಒಟ್ಟು 18 ಮಂದಿ ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಲೇಬೇಕು ಎಂದು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಬೆಂಬಲಿಗರ ಗುಂಪಿನೊಂದಿಗೆ ಮತದಾರರನ್ನು ಭೇಟಿ ಮಾಡುತ್ತಿದ್ದಾರೆ.


ಪ್ರಚಾರ ಭರಾಟೆ ಜೋರಾದಂತೆ ಅಭ್ಯರ್ಥಿಗಳ ಪರ ಸರ್ಕಾರಿ ಶಾಲೆಯ ಹಲವು ಶಿಕ್ಷಕರು ಸ್ವಯಂ ಪ್ರೇರಿತರಾಗಿಯೇ ಅಭ್ಯರ್ಥಿಗಳ ಜತೆ ಗುರುತಿಸಿಕೊಳ್ಳುವ ಜತೆಗೆ ಮತಯಾಚಿಸಲು ಮುಂದಾಗುವ ಮೂಲಕ ನೇರವಾಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದು ಮಕ್ಕಳ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಣಗಳ ಲಾಭ ಪಡೆಯಲು ಯತ್ನ

ಸರ್ಕಾರಿ ಶಾಲಾ ಶಿಕ್ಷಕರಲ್ಲೂ ಹಲವು ಗುಂಪುಗಳಿದ್ದು, ಪ್ರಾಥಮಿಕ, ಪ್ರೌಢ ಹಾಗೂ ಮುಖ್ಯಶಿಕ್ಷಕರ ಸಂಘಗಳಿವೆ. ಜತೆಗೆ ಜಾತಿಗೊಂದು ಶಿಕ್ಷಕರ ಸಂಘಗಳಿವೆ. ಶಿಕ್ಷಕರಲ್ಲಿನ ಬಣ ರಾಜಕೀಯದ ಲಾಭ ಪಡೆದುಕೊಳ್ಳಲು ಅಭ್ಯರ್ಥಿಗಳು ಆಮಿಷ ಒಡ್ಡುತ್ತಿದ್ದಾರೆ.

ಮತದಾರರಿಗೆ ಉಡುಗೊರೆ
ಇಲ್ಲಿ ಶಿಕ್ಷಕರೇ ಮತ ಚಲಾಯಿಸುವವರಾದರೂ ಆಮಿಷಗಳಿಗೆ ಕೈ ಒಡ್ಡುವವರು ಸಾಕಷ್ಟು ಮಂದಿಯಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ತೆರೆಮರೆಯಲ್ಲಿ ಶಿಕ್ಷಕರಿಗಾಗಿ ಪಾನಗೋಷ್ಠಿ ಏರ್ಪಾಡು ಮಾಡುವುದು, ಬೆಲೆ ಬಾಳುವ ಉಡುಗೊರೆ ನೀಡುವುದು, ಮಹಿಳಾ ಮತದಾರರಿಗೆ ಸೀರೆ, ಬೆಳ್ಳಿ ಉಡುಗೊರೆ ನೀಡುವ ಪ್ರಯತ್ನಗಳನ್ನು ತೆರೆಮರೆಯಲ್ಲಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಮಕ್ಕಳ ದಾಖಲಾತಿ ಮರೆತ ಶಿಕ್ಷಕರು
ಶೈಕ್ಷಣಿಕ ವರ್ಷದ ದಾಖಲಾತಿ ಆರಂಭವಾಗಿದ್ದು, ಶಾಲೆಗಳು ಜೂನ್ 1ರಿಂದ ಪ್ರಾರಂಭವಾಗಲಿವೆ. ಈಗಾಗಲೇ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿ ದಾಖಲಾತಿ ಪ್ರಾರಂಭವಾಗಿದೆ. ಆಯಾ ಗ್ರಾಮದಲ್ಲಿನ ಪಾಲಕರನ್ನು ಭೇಟಿ ಮಾಡಿ ಮಕ್ಕಳನ್ನು ನೋಂದಣಿ ಮಾಡಿಸುವಂತೆ ಶಿಕ್ಷಣ ಇಲಾಖೆ ಮೇಲಧಿಕಾರಿಗಳು ಶಿಕ್ಷಕರಿಗೆ ನಿರ್ದೇಶನ ನೀಡಿದ್ದಾರೆ. ಆದರೆ ಜವಾಬ್ದಾರಿ ಮರೆತು ಅಭ್ಯರ್ಥಿಗಳೊಂದಿಗೆ ಗುರುತಿಸಿಕೊಂಡು ತಿರುಗಾಡುತ್ತಿರುವುದಕ್ಕೆ ಪಾಲಕರ ವಲಯದಲ್ಲಿ ಆಕ್ಷೇಪ ಕೇಳಿಬಂದಿದೆ.

ಜತೆಯಲ್ಲಿ ಕಾಣಿಸಿಕೊಳ್ಳದಿದ್ದರೆ ಕಿರುಕುಳ..?
ಚುನಾವಣೆ ಸಮಯದಲ್ಲಿ ಶಿಕ್ಷಕರು ಅಭ್ಯರ್ಥಿಗಳೊಂದಿಗೆ ಗುರುತಿಸಿಕೊಳ್ಳದಿದ್ದರೆ ಅಧಿಕಾರಕ್ಕೆ ಬಂದ ನಂತರ ಗುರಿಯಾಗಿಸಿ, ವರ್ಗಾವಣೆ ಮಾಡಿಸುವುದು ಸೇರಿ ವಿವಿಧ ರೀತಿ ಕಿರುಕುಳ ನೀಡುತ್ತಾರೆ ಎಂಬ ಭಯ ಶಿಕ್ಷಕರನ್ನು ಕಾಡತೊಡಗಿದೆ. ಆದ್ದರಿಂದ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿಯಿಲ್ಲದಿದ್ದರೂ ಪ್ರಬಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಶಿಕ್ಷಕರನ್ನು ಒತ್ತಾಯಪೂರ್ವಕವಾಗಿಯೇ ಪ್ರಚಾರದಲ್ಲಿ ಭಾಗಿಯಾಗುವಂತೆ ಮಾಡುತ್ತಿದ್ದಾರೆ ಎಂದು ಶಿಕ್ಷಕರೊಬ್ಬರು ಆಳಲು ತೋಡಿಕೊಂಡಿದ್ದಾರೆ.

ಫಲಿತಾಂಶ ಕುಸಿತ ಮರೆತ ಶಿಕ್ಷಕರು
ಮಕ್ಕಳಿಗೆ ಪಾಠ ಮಾಡಬೇಕಾಗಿರುವ ಶಿಕ್ಷಕರು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಮೂಲಕ ನೇರವಾಗಿ ರಾಜಕೀಯ ಪಕ್ಷಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ