ರಾಮನಗರ: ಶಿಕ್ಷಕರ ಕ್ಷೇತ್ರಕ್ಕೆ ರಾಮನಗರ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದ್ದು ಶೇ.90 ಮತದಾನವಾಗಿದೆ. ಬೆಳಗ್ಗೆ 8 ಗಂಟೆಗೆ ಮತದಾನ ಪ್ರಾರಂಭವಾದರೂ ಕೆಲವೆಡೆ ಮಧ್ಯಾಹ್ನದ ನಂತರ ಪ್ರಕ್ರಿಯೆ ಚುರುಕುಗೊಂಡಿತು. ಕೆಲವೆಡೆ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಪರ ಮತಯಾಚಿಸುತ್ತಿರುವುದು ಕಂಡುಬಂತು. ಚುನಾವಣಾ ಆಯೋಗ ನೀಡಿರುವ ಕರೊನಾ ಮಾರ್ಗಸೂಚಿಗಳನ್ನು ಮತಗಟ್ಟೆಯಲ್ಲಿ ಪಾಲನೆ ಮಾಡುವುದರೊಂದಿಗೆ ಶಾಂತಿಯುತವಾಗಿಯೇ ಮತದಾನ ನಡೆಯಿತು.ವಿಧಾನ ಪರಿಷತ್ಗೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಮತದಾನ ಶಾಂತವಾಗಿ ನಡೆಯಿತು. ಜಿಲ್ಲೆಯ ಒಟ್ಟು 11 ಮತ ಕೇಂದ್ರಗಳಲ್ಲಿ ಬುಧವಾರ ಎಲ್ಲಿಯೂ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲ. ಇದರ ಜತೆಗೆ ಶಿಕ್ಷಕ ಕ್ಷೇತ್ರದ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡ ಹಿನ್ನೆಯಲ್ಲಿ ಶೇ.90 ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು 2499 ಮಂದಿ ಮತದಾರರಿದ್ದು, ಇವರದಲ್ಲಿ 2257 ಮಂದಿ ಮತಚಲಾವಣೆ ಮಾಡಿದ್ದು, ಇದಲ್ಲಿ ಪುರುಷರು 1414, ಮಹಿಳೆಯರು 843 ಮತ ಚಲಾವಣೆಯಾಗಿದೆ.
ಮತ ಬೇಟೆ: ಮತ ಕೇಂದ್ರದ ಬಳಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಬೇಟೆ ನಡೆಸುತ್ತಿದ್ದರು. ತಮ್ಮ ಅಭ್ಯರ್ಥಿಗೆ ಮತ ಹಾಕಿಸಿಕೊಳ್ಳಲು ಮತದಾರರನ್ನು ಅವರ ಮನೆ ಬಾಗಿಲಿಗೆ ಹೋಗಿ ಕರೆತರುವ ಕೆಲಸದಲ್ಲಿ ನಿರತರಾಗಿದ್ದರು. ಇದರ ಜತೆಗೆ ಪುಟ್ಟಣ್ಣ ಪರವಾಗಿ ಪ್ರಚಾರಕ್ಕೆ ನಿಂತಿದ್ದ ಸರ್ಕಾರಿ ನೌಕಕರ ಸಂಘದ ಪದಾಧಿಕಾರಿಗಳು ತಾವೇ ಪ್ರತ್ಯೇಕ ಶಾಮಿಯಾನ ಹಾಕಿಕೊಂಡು ಮತದಾರರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದರು.
ಕಾಂಗ್ರೆಸ್ಗೆ ಬಲವಿಲ್ಲ: ಒಂದೆಡೆ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ, ಜೆೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಅವರ ಪರವಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಹುರುಪಿನಿಂದ ಓಡಾಟ ನಡೆಸಿ, ಮತಕೇಂದ್ರದ ಬಳಿ ಮತದಾರರನ್ನು ಓಲೈಸುವ ಕೆಲಸ ಮಾಡುತ್ತಿದ್ದರೆ, ಕಾಂಗ್ರೆಸ್ ವಲಯ ಮಾತ್ರ ಬಿಕೋ ಎನ್ನುತ್ತಿತ್ತು. ಜೆಡಿಎಸ್-ಬಿಜೆಪಿ ವಲಯದಲ್ಲಿ ಕಾರ್ಯಕರ್ತರು ಮುಖಂಡರು ತುಂಬಿ ತುಳುಕುತ್ತಿದ್ದರೆ, ಕಾಂಗ್ರೆಸ್ನಲ್ಲಿ ಕೇವಲ 4 ಮಂದಿ ನಾಮ್ೇವಾಸ್ತೆಗೆ ಎನ್ನುವಂತೆ ಕುಳಿತಿದ್ದರು. ಈ ಬಗ್ಗೆ ಕೇಳಿದರೆ ನಮ್ಮ ಮುಖಂಡರು ಎಲ್ಲರೂ ರಾಜರಾಜೇಶ್ವರಿ ಕ್ಷೇತ್ರದ ಪ್ರಚಾರದಲ್ಲಿ ಇದ್ದು ಯಾರೂ ಬರಲಿಲ್ಲ ಎನ್ನುವ ಸಮಜಾಯಿಷಿ ನೀಡುತ್ತಿದ್ದರು.
ಕನಕಪುರದಲ್ಲಿ ಶೇ.87 ಮತದಾನ
ಕನಕಪುರ: ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕನಕಪುರ ವಿಧಾನಸಭಾ ಕ್ಷೇತ್ರದ ಮೂರು ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದು, ಶೇ.87.12 ರಷ್ಟು ಮತದಾನವಾಗಿದೆ.
ಬುಧವಾರ ನಡೆದ ಚುನಾವಣೆಗೆ ಕ್ಷೇತ್ರದಲ್ಲಿ ಮೂರು ಮತಗಟ್ಟೆಗಳನ್ನು ತೆರೆಯಲಾಗಿತ್ತು. ಕನಕಪುರ ನಗರ ಮತಗಟ್ಟೆಯಲ್ಲಿ 497 ಮತದಾರರಿದ್ದು, 439 ಮತಗಳು ಚಲಾವಣೆಯಾಗಿದೆ. ಹಾರೋಹಳ್ಳಿಯಲ್ಲಿ 108 ಮತದಾರರಿದ್ದು, 88 ಮಂದಿ ಚಲಾಯಿಸಿದ್ದಾರೆ. ಕೋಡಿಹಳ್ಳಿಯಲ್ಲಿ 63 ಮತದಾರರಿದ್ದು, 55 ಮಂದಿ ಹಕ್ಕು ಚಲಾಯಿಸಿದ್ದು, ಒಟ್ಟು 668 ಮತದಾರರಿಗೆ 582 ಮಂದಿ ಹಕ್ಕು ಚಲಾಯಿಸಿದ್ದು, ಶೇ. 87.30ರಷ್ಟು ಮತದಾನ ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಿತು.
ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು. ಪ್ರಾರಂಭದಲ್ಲಿ ಮತ ಚಲಾಯಿಸುವವರು ವಿರಳವಾದರೂ ಮಧ್ಯಾಹ್ನದ ನಂತರ ಮತದಾನ ಬಿರುಸುಗೊಂಡು ಮತಗಟ್ಟೆ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಶಿಕ್ಷಕರ ಕ್ಷೇತ್ರದಲ್ಲಿಯೂ ಸಹ ತೀವ್ರ ಪೈಪೋಟಿ ಕಂಡುಬಂತು. ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಶಿಕ್ಷಕರು ಗುಂಪುಗುಂಪಾಗಿ ಮತದಾರರ ಮನವೊಲಿಸುವತ್ತ ಕೇಂದ್ರೀಕೃತಗೊಂಡಿದ್ದರು. ಸ್ಥಳೀಯ ಶಾಸಕ ಮತ್ತು ಸಂಸದರು ಇದ್ದರೂ ಸಹ ಕಾಂಗ್ರೆಸ್ನ ಪ್ರಭಾವ ಕಂಡುಬರಲಿಲ್ಲ.
ಮತಗಟ್ಟೆ ಕೇಂದ್ರದ 100 ಮೀಟರ್ ಅಂತರದಲ್ಲಿ ಮತದಾರರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತದಾರರು ತಾಲೂಕು ಕಚೇರಿಯಲ್ಲಿ ಪರಸ್ಪರ ಅಂತರ ಹಾಗೂ ಮಾಸ್ಕ್ ಹಾಕಿಕೊಂಡು ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸುತ್ತಿದ್ದದ್ದು ಕಂಡುಬಂತು.
ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ
ಚನ್ನಪಟ್ಟಣ: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ತಾಲೂಕಿನ 739 ಮತದಾರರಲ್ಲಿ 679 ಮಂದಿ ಹಕ್ಕು ಚಲಾಯಿಸುವ ಮೂಲಕ ಶೇ.92 ರಷ್ಟು ಮತದಾನ ನಡೆದಿದೆ.
ನಗರದ ಮತಗಟ್ಟೆ ಸಂಖ್ಯೆ 64ರಲ್ಲಿ 646 ಮತದಾರರಲ್ಲಿ 596 ಮಂದಿ ಮತ ಚಲಾಯಿಸಿದರೆ, ಕೋಡಂಬಳ್ಳಿ ಮತಗಟ್ಟೆಯಲ್ಲಿ 93 ಮತದಾರರ ಪೈಕಿ 83 ಮಂದಿ ತಮ್ಮ ಹಕ್ಕು ಚಲಾಯಿಸಿದರು.
ಶಾಂತುಯುತ ಮತದಾನ: ಎರಡು ಕೇಂದ್ರಗಳಲ್ಲಿ ಶಾಂತಿಯುತ ಮತದಾನ ಕಂಡುಬಂದಿತು. ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತ ಶಿಕ್ಷಕರು ಪರಸ್ಪರ ಅಂತರದೊಂದಿಗೆ ಮತಗಟ್ಟೆಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತಗಟ್ಟೆ ಕೇಂದ್ರ ಒಳಪ್ರವೇಶಿಸುವ ಮುನ್ನ ಮತದಾರರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಆರಂಭದಲ್ಲಿ ವಿರಳವಾಗಿ ಸಾಗಿದ ಮತದಾನ ಪ್ರಕ್ರಿಯೆ ಮಧ್ಯಾನ್ನದ ನಂತರ ವೇಗ ಪಡೆದುಕೊಂಡಿತ್ತು. ಅಂತಿಮವಾಗಿ ಶೇ.92 ರಷ್ಟು ಮತದಾನ ನಡೆಯಿತು.
ಬೆಂಬಲಿಗರಿಂದ ಮತಯಾಚನೆ: ಅಭ್ಯರ್ಥಿಗಳ ಪರ ಮತಕೇಂದ್ರದ ಮುಂಭಾಗ ಬೆಂಬಲಿಗರು ಮತಯಾಚನೆ ನಡೆಸಿದರು. ಎರಡು ಕೇಂದ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೂ ಇತರ ಅಭ್ಯರ್ಥಿಗಳ ಪರ ಮುಖಂಡರು, ಕಾರ್ಯಕರ್ತರು ಬೀಡುಬಿಟ್ಟು, ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದದ್ದು ಕಂಡುಬಂದಿತು. ಕೆಲಶಿಕ್ಷಕರು ಕೂಡ ತಮ್ಮ ಸಹೋದ್ಯೋಗಿ ಶಿಕ್ಷಕರನ್ನು ಮನವೊಲಿಸುತ್ತಿದದ್ದು ಸಾಮಾನ್ಯವಾಗಿತ್ತು.
ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಪರ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕೆಲವೊತ್ತು ಮತಕೇಂದ್ರದ ಬಳಿ ಕುಳಿತು ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಂ, ಜಿಲ್ಲಾ
ಉಪಾಧ್ಯಕ್ಷ ಎಲೆಕೇರಿ ರವೀಶ್ ಸೇರಿ ಹಲವು ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಪರ ಎರಡು ಕೇಂದ್ರಗಳಲ್ಲಿ ಪಕ್ಷದ ಸ್ಥಳೀಯ ಮುಖಂಡರು ಮತಯಾಚನೆ ನಡೆಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಹಿರಿಯ ಮುಖಂಡರಾದ ಸಿಂ.ಲಿಂ.ನಾಗರಾಜು, ಪಿಎಲ್ಡಿ ಬ್ಯಾಂಕ್ ಅದ್ಯಕ್ಷ ಗೋವಿಂದನಹಳ್ಳಿ ನಾಗರಾಜು ಸೇರಿ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಮತಕೇಂದ್ರದ ಮುಂಭಾಗ ಮತಯಾಚಿಸಿದರು.
ಮತಗಟ್ಟೆ ಹೊರಗೆ ಕಾರ್ಯಕರ್ತರ ಪ್ರಚಾರ
ಮಾಗಡಿ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಮಾಗಡಿ ತಾಲೂಕಿನಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಶಾಂತಿಯುತ ಮತದಾನ ನಡೆಯಿತು.
ತಾಲೂಕಿನ ಹೋಬಳಿ ವ್ಯಾಪ್ತಿಯ 4 ಕಡೆ ಮತಗಟ್ಟೆ ಸ್ಥಾಪಿಸಿ ಬೆಳಗ್ಗೆ 8 ರಿಂದ 5 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಪಟ್ಟಣ ಮತ್ತು ಮಾಡಬಾಳ್ ವ್ಯಾಪ್ತಿಯ ಮತಗಟ್ಟೆಯನ್ನು ತಾಲೂಕು ಕಚೇರಿಯಲ್ಲಿ ಸ್ಥಾಪಿಸಲಾಯಿತು. ಪಟ್ಟಣದ, ಮಾಡಬಾಳ್ ಹೋಬಳಿ ವ್ಯಾಪ್ತಿಯಲ್ಲಿ 266 ಶಿಕ್ಷಕರು, ತಿಪ್ಪಸಂದ್ರ 2, ಕುದೂರು 93, ಸೋಲೂರು 62 ಶಿಕ್ಷಕರು ಸೇರಿ ಒಟ್ಟು 446 ಮಂದಿ ಮತದಾರರಲ್ಲಿ 410 ಮಂದಿ ಮತ ಚಲಾಯಿಸಿದ್ದು ಶೇ.92ರಷ್ಟು ಮತದಾನವಾಗಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು, ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಮತಗಟ್ಟೆಯ ಹೊರಗಡೆ ಮತಯಾಚಿಸಿದರೆ, ಕೆಲವರು ಕಾರು, ಆಟೋಗಳಲ್ಲಿ ಶಿಕ್ಷಕರನ್ನು ಕರೆತಂದು ಮತದಾನ ಮಾಡಿಸುತ್ತಿರುವುದು ಕಂಡುಬಂತು.
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಮತದಾನ ಮಾಡಲು ಬಂದ ಪ್ರತಿಯೊಬ್ಬ ಶಿಕ್ಷಕರಿಗೂ ಮಾಸ್ಕ್ ಧರಿಸಿ, ಸ್ಯಾನಿಟೇಸರ್ ಸ್ಕ್ರೀನಿಂಗ್ ನಡೆಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಯಿತು. ಭದ್ರತೆಯ ಹಿತದೃಷ್ಟಿಯಿಂದ ಮತಗಟ್ಟೆಗೆ ಇಬ್ಬರು ಪೊಲೀಸ್ ಸಿಬ್ಬಂದಿ ನೇಮಕಮಾಡಲಾಯಿತು.