ಜಿಲ್ಲೆ

ಶೃಂಗಾರಗೊಳ್ಳುತ್ತಿದೆ ನಂ. 1 ಶಾಲೆ

Gadag

ವಿಜಯವಾಣಿ ಸುದ್ದಿಜಾಲ ಲಕ್ಷೆ್ಮೕಶ್ವರ

ಕರೊನಾ ಹರಡದಂತೆ ತಡೆಯಲು ಶಾಲೆಗೆ ವಿದ್ಯಾರ್ಥಿಗಳು ಬಾರದಿರುವಂತೆ ಸರ್ಕಾರ ಆದೇಶಿಸಿದೆ. ಈ ಸಮಯವನ್ನು ವ್ಯರ್ಥ ಮಾಡಬಾರದೆಂದು ಪಟ್ಟಣದ ನಂ. 1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಶಾಲೆ ಹಾಗೂ ಆವರಣದ ಸ್ವಚ್ಛತೆ, ಶೃಂಗಾರಗೊಳಿಸಲು ಮುಂದಾಗಿದ್ದಾರೆ.

ಶತಮಾನ ಕಂಡ ಈ ಶಾಲೆಯಲ್ಲಿ ಸಾವಿರಾರು ಮಕ್ಕಳು ಕಲಿತು ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಪಟ್ಟಣದ ಕೇಂದ್ರ ಭಾಗದಲ್ಲಿರುವ ಈ ಶಾಲೆಯ ಸುಧಾರಣೆಗೆ ಇಲ್ಲಿನ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಮಂಡಳಿಯವರು ಗಮನ ಹರಿಸಿರುವುದು ವಿಶೇಷ. ಹಳೆಯದಾದ, ಸೋರುವ ಶಾಲೆಯ ಸುಧಾರಣೆಗೆ ಇಲಾಖೆ ನೀಡಿದ ಅನುದಾನದಿಂದ ಹೊಸ ಕಟ್ಟಡ, ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ರಜಾ ಅವಧಿಯಲ್ಲಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವ, ಸಸಿ ನೆಡುವ ಜೊತೆಗೆ ಗೋಡೆಗಳಿಗೆ ಶಿಕ್ಷಣಕ್ಕೆ ಪೂರಕವಾದ ಚಿತ್ರಗಳನ್ನು ಬಿಡಿಸುವ ಮೂಲಕ ವಿದ್ಯಾರ್ಥಿಗಳ, ಪಾಲಕರ ಗಮನ ಸೆಳೆಯುವ ಕಾರ್ಯ ಮಾಡಲಾಗುತ್ತಿದೆ.

ಪಟ್ಟಣದ ಯುವ ಚಿತ್ರ ಕಲಾವಿದ ಪ್ರವೀಣ ಗಾಯಕರ ಅವರ ಕೈಚಳಕದಲ್ಲಿ ಶಾಲೆಯ ಕಾಂಪೌಂಡ್ ಗೋಡೆಗಳ ಅಂದ ಹೆಚ್ಚಿಸುವ ಕಾರ್ಯ ನಡೆದಿದೆ. ಶಾಲೆಯ ಗೋಡೆಗಳಿಗೆ ಬಣ್ಣ ಹಚ್ಚಲು ಪಟ್ಟಣದ ಶಿಕ್ಷಣ ಪ್ರೇಮಿ ಸೋಮು ಕಮಡೊಳ್ಳಿ, ಎಸ್​ಡಿಎಂಸಿಯ ಶಂಕರ ಬ್ಯಾಡಗಿ, ಜಗದೀಶ ನಾವ್ಹಿ ಕೈ ಜೋಡಿಸಿದ್ದಾರೆ.

ರಜೆ ದಿನದಲ್ಲೂ ಶಾಲೆಯಲ್ಲಿ ಕೆಲಸ ನಡೆಯುತ್ತಿರುವ ಸುದ್ದಿ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಶನಿವಾರ ಶಾಲೆಗೆ ಭೇಟಿ ನೀಡಿ ಶಿಕ್ಷಕ ಮತ್ತು ಶಾಲಾ ಸುಧಾರಣೆ ಕಮಿಟಿಯವರ ಶೈಕ್ಷಣಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಲಾವಿದನ ಪ್ರತಿಭೆಯನ್ನು ಪ್ರಶಂಶಿಸಿದರು. ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾದ ಮೇಲೆ ಶಾಲೆಗೆ ಇನ್ನೂ ಬೇಕಿರುವ ಸೌಲಭ್ಯಗಳನ್ನು ಇಲಾಖೆಯಿಂದ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಆರ್.ಎಸ್. ಬುರಡಿ ತಿಳಿಸಿದರು.