ಬೆಟ್ಟದಪುರ: ಶಿಕ್ಷಕರು ಶಿಸ್ತು, ತಾಳ್ಮೆ ಮತ್ತು ಓದುವ ಹವ್ಯಾಸ ಬೆಳೆಸಿಕೊಂಡರೆ ವಿದ್ಯಾರ್ಥಿಗಳು ಮೆಚ್ಚಿದ ಗುರುಗಳಾಗಬಹುದು ಎಂದು ಹಾಸನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಟರಾಜ್ ಹೇಳಿದರು.
ಬೆಟ್ಟದಪುರ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನದ ಯುಗದಲ್ಲಿ ಅಂಗೈನಲ್ಲಿಯೆ ಜ್ಞಾನದ ಎಲ್ಲ ಸಾಮಗ್ರಿಗಳು ಲಭಿಸುತ್ತವೆ. ಅವುಗಳನ್ನು ಪಡೆದುಕೊಂಡು ಜ್ಞಾನದ ನಿಧಿಗಳಾಗಬೇಕು. ಶಿಕ್ಷಕರು ಕೆಲಸದಲ್ಲಿನ ಅರ್ಪಣಾ ಮನೋಭಾವ, ತ್ಯಾಗ, ಶಿಸ್ತು ಮೈಗೂಡಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು.
ಕಾಲೇಜಿನ ಕಾರ್ಯದರ್ಶಿ ಡಾ.ಜೆ.ಸೋಮಣ್ಣ ಮಾತನಾಡಿ, ತಮ್ಮ ಆದರ್ಶ ಗುಣಗಳ ಮೂಲಕ ಶಿಕ್ಷಕ ವೃತ್ತಿಯನ್ನು ಉನ್ನತ ಮಟ್ಟಕ್ಕೆ ಡಾ.ರಾಧಾಕೃಷ್ಣ ಅವರು ಕೊಂಡೊಯ್ದರು ಎಂದರು.
ಪ್ರಾಂಶುಪಾಲ ಬಸವರಾಜು, ಉಪನ್ಯಾಸಕ ಆರ್.ಪಿ ಲೋಕೇಶ್, ಅಭಿಜಿತ್, ಮಹಾದೇವ ಪ್ರಸಾದ್, ಚೇತನ್, ರಮ್ಯಾ, ವಿದ್ಯಾರ್ಥಿ ನಾಯಕರಾದ ರುಕ್ಮಿಣಿ, ಐಶ್ವರ್ಯಾ, ಪಲ್ಲವಿ, ದೀಪಾ, ದರ್ಶಿನಿ, ಅರ್ಜುನ್ ಕುಮಾರ್, ಎ.ಎಸ್. ಐಶ್ವರ್ಯಾ, ವಿದ್ಯಾರ್ಥಿಗಳು ಇದ್ದರು.