ಜಿಲ್ಲೆ

ಶಿಕ್ಷಕರಿಂದ ಸಮಾಜ ಕಟ್ಟುವ ಕೆಲಸ: ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಭಿಮತ

reportermys

ಮಂಡ್ಯ: ಶಿಕ್ಷಕರು ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.

ನಗರದ ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಎಸ್‌ಬಿ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರು ಮಾಡಿರುವ ಉತ್ತಮ ಕೆಲಸವನ್ನು ಗುರುತಿಸುವುದು ಸಮಾಜದಲ್ಲಿ ಮುಖ್ಯವಾಗಬೇಕು. ಇದು ಮತ್ತೊಬ್ಬರಿಗೆ ಪ್ರೇರಣೆಯಾಗುತ್ತದೆ ಎಂದರು.

ಎಸ್‌ಬಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ಸಾಹಿತಿಗಳು ಕೂಡ ಶಿಕ್ಷಕರಿಗೆ ಸಮಾನವಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಅವರೂ ಸಹ ಕೃತಿಗಳನ್ನು ಬರೆದು ಸಮಾಜದಲ್ಲಿ ಗಮನ ಸೆಳೆಯುವ ಕೆಲಸ ಮಾಡುವ ಮೂಲಕ ಬಹುತೇಕ ವಿದ್ಯಾರ್ಥಿಗಳ ಗಮನ ಸೆಳೆಯುವ ಕೆಲಸ ಮಾಡುತ್ತಾರೆ. ಹಲವಾರು ಮಹನೀಯರ ಸಾಹಿತಿಗಳು ಬರೆದಿರುವ ಕೃತಿಗಳನ್ನು ಒದುವುದು ನಮ್ಮ ವಿದ್ಯಾರ್ಥಿಗಳೇ ಆಗಿರುವುದು ವಿಶೇಷ ಎಂದು ಬಣ್ಣಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವುದರಲ್ಲಿ ಶಿಕ್ಷಕರು ಹೆಚ್ಚು ಶ್ರಮ ವಹಿಸುತ್ತಾರೆ. ವಿದ್ಯಾರ್ಥಿಗಳಿಗೆ ಜವಾಬ್ದಾರಿ, ಶಿಸ್ತು, ಸಂಸ್ಕಾರ ಕಲಿಸುವುದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಕೆಲ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದರೂ ಅವರಿಗೆ ಸಂಸ್ಕಾರದ ಅರಿವಿರುವುದಿಲ್ಲ. ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಕಾಯಕವೆಂದರೆ ಅದು ಶಿಕ್ಷಕ ವೃತ್ತಿ ಎಂಬುದನ್ನು ಯಾರೂ ಮರೆಯಬಾರದು ಎಂದರು.

ಸಮಾಜ ಸೇವಕ ಕೆ.ಕೆ.ರಾಧಾಕೃಷ್ಣ, ಟ್ರಸ್ಟ್‌ನ ಶೈಕ್ಷಣಿಕ ಪಾಲುದಾರ ಕೆ.ಚೇತನ್‌ಕೃಷ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಮಂಡ್ಯ ತಾಲೂಕು ಅಧ್ಯಕ್ಷ ಮುತ್ತೇಗರೆ ಮಂಜು, ನಗರಾಧ್ಯಕ್ಷೆ ಸುಜಾತಾ ಕೃಷ್ಣ, ಗೌರವ ಕಾರ್ಯದರ್ಶಿಗಳಾದ ದರಸಗುಪ್ಪೆ ಧನಂಜಯ, ಹರ್ಷ ಇತರರಿದ್ದರು.