ಮಂಡ್ಯ: ಶಿಕ್ಷಕರ ಯಾವುದೇ ಸಮಸ್ಯೆಗಳಿಗೆ ಸದನದಲ್ಲಿ ನಾನು ದನಿಯಾಗಿರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಭರವಸೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.ಪಾಲ್ಗೊಂಡು ಮಾತನಾಡಿದ ಅವರು, ನನ್ನ 72 ತಿಂಗಳ ಅಧಿಕಾರಾವಧಿಯಲ್ಲಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತೇನೆ. ಅದಕ್ಕಿಂತ ಹೆಚ್ಚಾಗಿ ನೀವುಗಳು ನನ್ನನ್ನು ದುಡಿಸಿಕೊಳ್ಳಿ ಎಂದು ಹೇಳಿದರು.
ಶಿಕ್ಷಕರ ಮಹತ್ವವನ್ನು ಮನಗಂಡೇ ಸರ್ಕಾರ ಎಲ್ಲ ರೀತಿಯ ಗೌರವ ಸೂಚಿಸುತ್ತ ಬಂದಿದೆ. ಆದರೆ ಇಂದು ಶೈಕ್ಷಣಿಕ ವ್ಯವಸ್ಥೆಯನ್ನು ಎಲ್ಲರೂ ನೋಡುತ್ತಿದ್ದಾರೆ. ಹಿಂದೆ ಜ್ಞಾನಾಧಾರಿತವಾಗಿದ್ದ ಶಿಕ್ಷಣ ಇಂದು ಯಂತ್ರಾಧಾರಿತವಾಗುತ್ತಿದೆ. ಆದರೆ ಸಂವೇದನೆ, ಭಾವನಾತ್ಮಕತೆ ಯಾಂತ್ರೀಕರಣದಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಎಡಿಸಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಶಿಕ್ಷಕರಿಲ್ಲದೆ ಯಾರು ಕೂಡ ವ್ಯಕ್ತಿತ್ವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಇಂದು ಶಿಕ್ಷಕರು ಹೋರಾಟಗಾರರಾಗಿ ಪರಿವರ್ತಕರಾಗಿ ಸ್ಥಾನಮಾನವನ್ನು ಪಡೆದುಕೊಳ್ಳಬೇಕಾದರೆ ಸೃಜನಾತ್ಮಕವಾಗಿ ಕೆಲಸವನ್ನು ನಿರ್ವಹಿಸಬೇಕು. ವಿದ್ಯಾರ್ಥಿಗಳನ್ನು ದೇಶದ ಆಸ್ತಿಯನ್ನಾಗಿ ಪರಿವರ್ತಿಸಲು ಶಿಕ್ಷಕರು ಸ್ಥಾನಮಾನವನ್ನು ವೃದ್ಧಿಸಿಕೊಳ್ಳಬೇಕು. ಹಿಂದಿನ ಕಾಲದಿಂದಲೂ ಅತ್ಯಂತ ಶ್ರೇಷ್ಠವಾದ ಕರ್ತವ್ಯ ಅಂದರೆ ಶಿಕ್ಷಕರ ವೃತ್ತಿ ಎಂದರು.
ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಡಿಡಿಪಿಐ ಟಿ.ಜವರೇಗೌಡ, ಡಯಟ್ ಪ್ರಾಂಶುಪಾಲ ಎಂ.ಶಿವಮಾದಪ್ಪ, ಬಿಇಒಗಳಾದ ಚಂದ್ರಕಾಂತ, ಸೌಭಾಗ್ಯ, ಚಿಕ್ಕಸ್ವಾಮಿ, ಅಂ.ಚಿ.ಸಣ್ಣಸ್ವಾಮಿ, ಶಿವಚಿದಂಬರ್, ಗೋಪಾಲೇಗೌಡ, ಎಚ್.ವಿ.ಜಯರಾಂ, ಕೆ.ನಾಗೇಶ್, ಪುಟ್ಟರಾಜಯ್ಯ, ಆರ್.ದೇವರಾಜು, ರವೀಶ್, ರವಿಶಂಕರ್ ಇತರರಿದ್ದರು.
ಇದೇ ವೇಳೆ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 10, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 9 ಹಾಗೂ ಪ್ರೌಢಶಾಲಾ ವಿಭಾಗದಿಂದ 10 ಜನ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಕಾಲಿಕ ನಿಧನರಾದ ಶಿಕ್ಷಕರ ಕುಟುಂಬದವರಿಗೆ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.