ಚಿತ್ರದುರ್ಗ: ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ, ಉಪನ್ಯಾಸ, ಗಣ್ಯರ ಭಾಷಣ ಸಾಮಾನ್ಯ. ಅದರಲ್ಲಿ ಯಾವುದೇ ಹೊಸತನ ಇರುವುದಿಲ್ಲ ಎಂಬುದು ಸಾಮಾನ್ಯ ಆರೋಪ.
ಇದನ್ನು ಇನ್ನಷ್ಟು ಅರ್ಥಪೂರ್ಣವಾಗಿ ಮಾಡುವುದು ಹೇಗೆ ಎಂದು ತಿಳಿಯುವ ಪ್ರಯತ್ನ ಇಲ್ಲಿದೆ. ಈ ಬಗ್ಗೆ ಹಾಲಿ ಶಿಕ್ಷಕರು, ನಿವೃತ್ತ ಶಿಕ್ಷಕರು ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಶಿಕ್ಷಕರಿಗೆ ರಚನಾತ್ಮಕವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಬೇಕು. ಪ್ರತಿ ಶಾಲೆಯಲ್ಲಿ ಗುರು-ಪರಂಪರೆಯ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಶಾಲಾ ಆವರಣದಲ್ಲಿ ಸಸಿ ನೆಟ್ಟು ಪೋಷಿಸಿ, ಪ್ರತಿ ಗಿಡಕ್ಕೂ ಶಿಕ್ಷಕರ ಹೆಸರನ್ನಿಟ್ಟು ಬೆಳೆಸುವ ಸಂಕಲ್ಪ ಮಾಡಬೇಕು. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕು. ಸಾರ್ವಜನಿಕ ಸಂಘ, ಸಂಸ್ಥೆಗಳು ಶಿಕ್ಷಕರ ದಿನವನ್ನು ಆಚರಿಸಬೇಕು ಎನ್ನುವ ಸಲಹೆಗಳು ಮೂಡಿಬಂದವು.
ಶಿಕ್ಷಕ ಸಮೂಹಕ್ಕೆ ಹೆಮ್ಮೆ: ಶಿಕ್ಷಕರ ದಿನದ ಅಂಗವಾಗಿ ರಾಷ್ಟ್ರ, ರಾಜ್ಯ, ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅವರನ್ನು ಗೌರವಿಸಲಾಗುತ್ತಿದೆ. ಶಿಕ್ಷಕರಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ದೇಶದ ಅತ್ಯುನ್ನತ ಹುದ್ದೆಗೇರಿದ್ದು ಶಿಕ್ಷಕ ಸಮೂಹಕ್ಕೆ ಹೆಮ್ಮೆ ವಿಷಯ. ವಿದ್ಯಾರ್ಥಿಗಳು ಕೂಡ ನಮ್ಮ ಈ ಸಂಭ್ರಮದಲ್ಲಿ ಭಾಗವಹಿಸುವುದು ಹರ್ಷ ತರಿಸುತ್ತದೆ.- ಉಷಾ ಕರಣಂ, ಶಿಕ್ಷಕಿ, ಸಕಿಪ್ರಾ ಶಾಲೆ, ಕಾಟಪ್ಪನಹಟ್ಟಿ, ಹಿರಿಯೂರು
ಭಾರತೀಯ ಸಂಸ್ಕೃತಿಯ ಪ್ರತಿಬಿಂಬ: ಗುರುಗಳನ್ನು ಗೌರವಿಸುವ ಭಾರತೀಯ ಸಂಸ್ಕೃತಿಗೆ ಪೂರಕವಾಗಿ ಶಿಕ್ಷಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಗುರುಗಳ ಮೇಲಿರುವ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದಕ್ಕೆ ಪೂರಕವಾಗಿ ಉತ್ತಮ ಶಿಕ್ಷಕರನ್ನು ಗುರುತಿಸಿ ಅವರನ್ನು ಗೌರವಿಸಲಾಗುತ್ತಿದೆ. ಸರ್ಕಾರ, ಸಮಾಜದ ಈ ನಡೆ ಶಿಕ್ಷಕ ಸಮೂಹದ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ.- ಆರ್.ಜೆ.ಮೊಹಮದ್ ತಾಜೀರ್ ಬಾಷಾ, ಶಿಕ್ಷಕ, ಜಿಯುಎಚ್‌ಪಿಎಸ್, ಹಿದಾಯತ್‌ಪುರ, ಚಿತ್ರದುರ್ಗ
ಹೊಸ ಆವಿಷ್ಕಾರಗಳು ಸಹಕಾರಿ: ಸರ್ಕಾರದ ವೇತನ ಪಡೆದು ಬದುಕು ಕಟ್ಟಿಕೊಂಡಿರುವ ನಾವು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡುವುದರಲ್ಲಿ ಸಮಯ ಪಾಲನೆ ಹಾಗೂ ಪರಸ್ಪರ ಸಮನ್ವಯತೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕ, ಹೊಸ ಅವಿಷ್ಕಾರ, ಶಿಕ್ಷಣದ ಚಟುವಟಿಕೆಗಳಿಗೆ ಅಗತ್ಯವಿರುವ ಸೌಲಭ್ಯ ಇತ್ಯಾದಿ ಮೂಲ ಸೌಕರ್ಯ ಕಲ್ಪಿಸಿದರೆ ಸರ್ಕಾರಿ ಶಾಲೆಗಳಲ್ಲಿ ಬದಲಾವಣೆ ತರಲು ಸಹಕಾರಿ ಆಗಲಿದೆ.- ಎಚ್.ಓಂಕಾರಪ್ಪ, ನಿವೃತ್ತ ಶಿಕ್ಷಕ, ಮೊಳಕಾಲ್ಮೂರು
ಶಿಕ್ಷಕರ ಕೊರತೆ ದೊಡ್ಡ ಸವಾಲು: ರಾಜ್ಯದ ಗಡಿ ಅಂಚಿನಲ್ಲಿರುವ ಮೊಳಕಾಲ್ಮೂರು ತಾಲೂಕು ಅತ್ಯಂತ ಹಿಂದುಳಿದ ಪ್ರದೇಶ. ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಅನಾದಿ ಕಾಲದಿಂದಲೂ ಶಿಕ್ಷಕರ ಕೊರತೆ ದೊಡ್ಡ ಸವಾಲಾಗಿದೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಲು ಅಗತ್ಯ ಇರುವ ಶಿಕ್ಷಕರ ನೇಮಕಾತಿ ಆಗಬೇಕಿದೆ. ವಿಶೇಷವಾಗಿ ಕರ್ನಾಟಕ ಪಬ್ಲಿಕ್ ಕನ್ನಡ ಶಾಲೆ ಹಾಗೂ ಆಯ್ದ ಶಾಲೆಗಳಲ್ಲಿ ಇತ್ತೀಚೆಗೆ ಆರಂಭವಾಗಿರುವ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಶಿಕ್ಷಕರ ನೇಮಕಾತಿ ಇಲ್ಲದ ಕಾರಣ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.- ಟಿ.ಎಸ್.ರಾಜಶೇಖರ್, ನಿವೃತ್ತ ಶಿಕ್ಷಕ, ಮೊಳಕಾಲ್ಮೂರು
ಅತ್ಯಂತ ಬಹುದೊಡ್ಡ ಉನ್ನತ ಸ್ಥಾನ: ಬದುಕನ್ನು ಸಮಾಜಕ್ಕೆ ಸಮರ್ಪಣೆ ಮಾಡಿಕೊಳ್ಳಲು ಸೈನಿಕ, ರೈತ, ಇಲ್ಲವೆ ಶಿಕ್ಷಕನಾಗಬೇಕು. ಈ ನಿಟ್ಟಿನಲ್ಲಿ ಬಹಳಷ್ಟು ಮಂದಿ ಈ ವೃತ್ತಿಯನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವೃತ್ತಿ ದೇಶದ ಎಲ್ಲ ಸ್ಥಾನಗಳಿಗಿಂತಲೂ ಮಿಗಿಲು. ಆದ್ದರಿಂದ ಶಿಕ್ಷಕರ ದಿನಾಚರಣೆ ಸಮುದಾಯದೊಂದಿಗೆ ಸಂಭ್ರಮಿಸುವ ಸಂಬಂಧವಾಗಬೇಕು. ಶಿಕ್ಷಣ ಇಲಾಖೆಗೆ ಸೀಮಿತವಾಗಬಾರದು. ವೃತ್ತಿಯ ಮಹತ್ವ ಕಾಪಾಡಿಕೊಳ್ಳಲು ಶಿಕ್ಷಕರಲ್ಲಿ ಕೆಲ ತ್ಯಾಗದ ಗುಣ ಇರಬೇಕು.- ಬಿ.ವಿ.ಸಿರಿಯಪ್ಪ, ನಿವೃತ್ತ ಪ್ರಾಚಾರ್ಯ, ಚಳ್ಳಕೆರೆ
ಗುರಿ ತಲುಪಲು ಬೇಕು ಗುರು: ಗುರುವಿಲ್ಲದೆ ಗುರಿಯನ್ನು ತಲುಪುವುದು ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರಧಾರನೇ ಶಿಕ್ಷಕ. ಮಕ್ಕಳ ಉಜ್ವಲ ಭವಿಷ್ಯ ಸಾಕಾರಗೊಳಿಸಲು ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು.- ಎಚ್.ಡಿ.ಹನುಮಂತರಾಯಪ್ಪ. ನಿವೃತ್ತ ದೈಹಿಕ ಶಿಕ್ಷಕ. ಹರಿಯಬ್ಬೆ
ಜನರ ಹಬ್ಬವಾಗಬೇಕು: ಶಿಕ್ಷಕರು ಜಗತ್ತಿನಾದ್ಯಂತ ಏಕರೂಪವಾಗಿ ಗೌರವಿಸುವ ವರ್ಗವಾಗಿದೆ. ಪ್ರಸ್ತುತ ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳೇ ಆಯೋಜಿಸಿ ಆಚರಣೆ ಮಾಡುತ್ತಾ ಬರುತ್ತಿದ್ದಾರೆ. ಇದಕ್ಕೆ ಬದಲಾಗಿ ನಾಗರಿಕರು ಸಂಘಟಿಸಿ ಈ ದಿನವನ್ನು ಹಬ್ಬದ ರೀತಿ ಆಚರಿಸಬೇಕು.-ಎಲ್.ನಾಗರಾಜಾಚಾರ್, ಉಪ ಪ್ರಾಚಾರ್ಯ, ಕೆಪಿಎಸ್‌ಶಾಲೆ, ಹೊಸಯಳನಾಡು