ತುಮಕೂರು: ಮಕ್ಕಳಿಗೆ ಅಂಕಗಳಿಸುವ ಶಿಕ್ಷಣಕ್ಕಿಂತ ಸಾಮಾಜಿಕ ಪ್ರಜ್ಞೆ ಮೂಡಿಸುವ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹೇಳಿದರು.
ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 133ನೇ ಜನ್ಮ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಜಾತಿಭೇದವಿಲ್ಲದಿರುವಂತಹ, ಸೋಲು-ಗೆಲುವನ್ನು ಸಮಾನವಾಗಿ ಕಾಣುವಂತಹ ಮೌಲ್ಯಯುತ ಶಿಕ್ಷಣ ನೀಡಬೇಕಿದೆ. ಈ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕರೊನಾ ಸಂಕಷ್ಟದಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿರುವ ಶಿಕ್ಷಕರ ಕಾರ್ಯಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿದ್ಯೆ ಕಲಿಸಲು ಮುಂದೆ ಬಂದಿರುವ ಶಿಕ್ಷಕರ ಕಾರ್ಯ ಮಾದರಿ ಎಂದು ಮೇಯರ್ ಫರಿದಾಬೇಗಂ ಹೇಳಿದರು. ಜಿಪಂ ಉಪಾಧ್ಯಕ್ಷೆ ಶಾರದಾ ಅಧ್ಯಕ್ಷತೆವಹಿಸಿದ್ದರು. ತಾಪಂ ಅಧ್ಯಕ್ಷೆ ಕವಿತಾ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಎಎಸ್ಪಿ ಟಿ.ಜೆ.ಉದೇಶ್, ಜಿಪಂ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಕೆ.ಮಂಜುನಾಥ್, ಡಿಡಿಪಿಐ ಸಿ.ನಂಜಯ್ಯ, ಬಿಇಒ ಹನುಮಾನಾಯ್ಕ ಇದ್ದರು.
ಸಚಿವರು ಗೈರು: ಶಿಕ್ಷಕರ ದಿನಾಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಿಕ್ಷಕರ ಪ್ರತಿನಿಧಿ ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ, ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮತ್ತಿತರರು ಗೈರಾಗಿದ್ದರು. 7 ತಿಂಗಳ ಬಳಿಕ ತೆರೆದ ರಂಗಮಂದಿರ : ಮಾರ್ಚ್ 8 ರಂದು ಕೊನೆಯ ಕಾರ್ಯಕ್ರಮ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದಿದ್ದು ಕರೊನಾ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ರಂಗಮಂದಿರವನ್ನು 7 ತಿಂಗಳ ಬಳಿಕ ಮೊದಲ ಬಾರಿಗೆ ಸಮಾರಂಭಕ್ಕೆ ಬಳಸಲಾಯಿತು. ಜಿಲ್ಲಾಧಿಕಾರಿ ಮನವಿ ಮೇರೆಗೆ ರಂಗಮಂದಿರವನ್ನು ಶಿಕ್ಷಕರ ದಿನಾಚರಣೆಗೆ ನೀಡಲಾಗಿದೆ.
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು: ಎಲ್‌ಪಿಎಸ್: ವಿಮಲಾ ರೀಟಾ ಟಿ.ಎ., (ಮುಸುಕೊಂಡ್ಲಿ), ಐ.ಆರ್.ಉಮೇಶ್ (ಹೊನ್ನೇಗೌಡನಪಾಳ್ಯ), ಜಿ.ಸಿ. ಕುಮಾರ್ (ದಾಸಿಹಳ್ಳಿ), ಜಯಶಂಕರ್ (ಕರೆಕಲ್‌ಪಾಳ್ಯ), ಎಂ.ಜಿ. ಶಶಿಕಲಾ (ನಂದಿಹಳ್ಳಿ), ಪದ್ಮಾ ಜಿ.ಆರ್. (ಮಾಸ್ತಿಗೊಂಡನಹಳ್ಳಿ) ಎಚ್‌ಪಿಎಸ್: ಮಂಜುನಾಥ ಜೆ.ಜಿ.(ಮಂಚಲದೊರೆ), ಜಿ.ಶ್ರೀನಿವಾಸಯ್ಯ (ಬಳ್ಳಗೆರೆ), ಎಸ್.ಪಿ.ರತೀಶ್‌ಕುಮಾರ್ (ಬೊಮ್ಮೇನಹಳ್ಳಿ), ಬಿ.ಸುಂದರಮೂರ್ತಿ (ಹುಲಿಹಳ್ಳಿ), ಹೇಮಂತರಾಜು (ಕಿಚ್ಚವಾಡಿ), ಡಿ.ಶಿವರಾಜಯ್ಯ (ಕೋರಾ). ಪ್ರೌಢಶಾಲೆ ವಿಭಾಗ: ಡಿ.ಆರ್.ಶಶಿಧರ (ಶಿವಪುರ), ಅಜ್ಜಯ್ಯ (ಅಮೃತೂರು), ಕೆ.ಬಿ.ಶಂಕರಲಿಂಗಪ್ಪ (ನೊಣವಿನಕೆರೆ), ಡಿ.ಎಸ್. ಶಿವಸ್ವಾಮಿ(ತುಮಕೂರು), ಸಿ.ಸತೀಶ್‌ಕುಮಾರ್ (ತುರುವೇಕೆರೆ), ಎಂ.ಜಿ.ವೆಂಕಟೇಶಯ್ಯ (ತಂಡಗ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಖಾಸಗಿ ಶಾಲಾ ವಿಭಾಗ: ಖಾಸಗಿ ಪ್ರೌಢಶಾಲಾ ವಿಭಾಗದಲ್ಲಿ ಎಸ್.ವೀಣಾ (ಮಾರುತಿ ಇಂಟರ್‌ನ್ಯಾಷನಲ್ ಸ್ಕೂಲ್), ಎಚ್.ಎಸ್.ಪಂಚಾಕ್ಷರಿ ಸ್ವಾಮಿ (ಸೆಂಟ್ ಜೋಸೆಫ್ ಶಾಲೆ), ಕೆ.ಸಿ.ಪುಷ್ಪಲತಾ (ಚೈತನ್ಯ ವಿದ್ಯಾಮಂದಿರ), ನಾಗರತ್ನಮ್ಮ (ಆಜಾದ್ ಮಾಡ್ರನ್ ಶಾಲೆ), ಸಿ.ಎಸ್. ಭಾರತಿ (ವಿದ್ಯಾನಿಕೇತನ್) ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿ.ಸವಿತಾ (ವಿವೇಕಾನಂದ), ಸಿ.ಎಸ್.ಅನಸೂಯ (ಚೇತನ ವಿದ್ಯಾಮಂದಿರ) ಅವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.