ಜಿಲ್ಲೆ

ಕರೊನಾ ಪರಿಹಾರ ಹಣ ತಲುಪಿಸಲು ಯತ್ನ : ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿಕೆ

Ramanagara

ರಾಮನಗರ: ಕರೊನಾ ಕಾರಣದಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ಶಾಲೆಗಳು, ಸಂಸ್ಥೆಗಳನ್ನು ಉಳಿಸಿಕೊಳ್ಳುವ ಜತೆಗೆ ಸಿಬ್ಬಂದಿಯ ಹಿತ ಕಾಯಲು ಸಾಕಷ್ಟು ಕಷ್ಟಪಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದರು.

ನಗರದ ಶಾಂತಿನಿಕೇತನ ಕಾಲೇಜಿನ ಆವರಣದಲ್ಲಿ ಜಿಲ್ಲೆಯ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರ ಘೋಷಿಸಿರುವ ಕರೊನಾ ಲಾಕ್‌ಡೌನ್ ಪರಿಹಾರ ಹಣ ತಲಾ 5 ಸಾವಿರ ರೂ. ಇನ್ನು ಅನೇಕ ಶಿಕ್ಷಕರಿಗೆ ತಲುಪಿಲ್ಲ. ಇದನ್ನು ಎಲ್ಲ ಶಿಕ್ಷಕರಿಗೆ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮಾತನಾಡಿ, ಖಾಸಗಿ ಅನುದಾನ ರಹಿತ ಶಾಲೆಗಳ ಬೋಧನಾ ಶುಲ್ಕ ನಿಗದಿಪಡಿಸುವ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಹಕ್ಕು ಇಲ್ಲ. ಆದರೂ ಸರ್ಕಾರ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ಯತ್ನಿಸುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಗೆ ವಾರ್ಷಿಕ ಗರಿಷ್ಠ 16 ಸಾವಿರ ರೂ. ಎಂದು ನಿಗದಿ ಮಾಡಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಒಂದು ಮಗುವಿಗೆ ಎಷ್ಟು ವೆಚ್ಚವಾಗುತ್ತಿದೆ ಎನ್ನುವುದು ಅವರಿಗೆ ತಿಳಿದಿಲ್ಲವೇ?. ಮಾಹಿತಿಯೊಂದರ ಪ್ರಕಾರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ತಲಾ 1 ಲಕ್ಷ ರೂ. ವೆಚ್ಚವಾಗುತ್ತಿದೆ ಎಂದರು.

ಖಾಸಗಿ ಶಾಲೆಗಳ ವಿಚಾರದಲ್ಲಿ ಕೆಲವರು ಪಾಲಕರ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯದಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ಪೈಕಿ ವಾರ್ಷಿಕ 10 ಸಾವಿರದಿಂದ 40 ಸಾವಿರ ರೂ. ಶುಲ್ಕ ಪಡೆಯುವ ಶಾಲೆಗಳು ಶೇ 90ರಷ್ಟಿದೆ. ಇವೆಲ್ಲ ಬಜೆಟ್ ಶಾಲೆಗಳು. ಪಾಲಕರು ಶುಲ್ಕ ಪಾವತಿಸದಿರುವುದರಿಂದ ಈ ಶಾಲೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದ ಅವರು ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ಕೊಡದಿರುವುದನ್ನು ಸಮರ್ಥಿಸಿಕೊಂಡರು. ಒಟ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಶೇ.55 ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರವಿದೆ. ಸರ್ಕಾರಿ ಶಾಲೆಗಳ ಪೈಕಿ 93 ಸಾವಿರ ಶಾಲೆಗಳಲ್ಲಿ ಏಕ ಶಿಕ್ಷಕರಿದ್ದಾರೆ. ಇಂತಹ ಪರಿಸ್ಥಿತಿ ಖಾಸಗಿ ಶಾಲೆಗಳಲ್ಲಿ ಇಲ್ಲ ಎಂದರು.

ಉಸ್ಮಾರ್ಡ್ ಸಂಘಟನೆಯ ಅಧ್ಯಕ್ಷ ಪಟೇಲ್. ಸಿ, ಗೌರವಾಧ್ಯಕ್ಷ ವೆಂಕಟಸುಬ್ಬಯ್ಯ ಚೆಟ್ಟಿ, ಸಂಘಟನೆಯ ಜಿಲ್ಲಾಧ್ಯಕ್ಷ ಪಟೇಲ್ ರಾಜು, ಡಿಡಿಪಿಐ ಸೋಮಶೇಖರಯ್ಯ, ಬಿಇಒಗಳಾದ ಮರೀಗೌಡ, ಯತಿರಾಜು, ಉಸ್ಮಾರ್ಡ್ ಸಂಘಟನೆಯ ಉಪಾಧ್ಯಕ್ಷ (ಚನ್ನಪಟ್ಟಣ) ಕಿರಣ್ ಪ್ರಸಾದ್ ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಬಿ.ಇಶಾಂತ್, ಖಜಾಂಚಿ ಬಾಲಗಂಗಾಧರ ಮೂರ್ತಿ, ಸಹಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷರಾದ ಪ್ರದೀಪ್ (ರಾಮನಗರ), ಎಸ್. ನವೀನ್ (ಕನಕಪುರ), ಧನಂಜಯ (ಮಾಗಡಿ), ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಆರ್.ಕುಮಾರಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.