ಮಧುಗಿರಿ: ಪ್ರಜಾಪ್ರಭುತ್ವ ಉಳಿದಿರುವುದು ಶಿಕ್ಷಕರಿಂದಲೇ ಹೊರತು ರಾಜಕಾರಣಿಗಳಿಂದಲ್ಲ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಶೈಕ್ಷಣಿಕ ಜಿಲ್ಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣ 133ನೇ ಜಯಂತಿ ಮತ್ತು ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಕರ ಮಾತನ್ನು ಎಲ್ಲರೂ ಕೇಳುತ್ತಾರೆ. ಅವರಿಗೆ ವಿಶೇಷವಾದ ಸ್ಥಾನಮಾನವಿದೆ. ಶಿಕ್ಷಕರಿಗೆ ಜವಾಬ್ದಾರಿ ಸಾಕಷ್ಟಿದ್ದು ತಂದೆ ತಾಯಿಗಳಿಗೆ ಸಿಗದಷ್ಟು ಗೌರವ ಶಿಕ್ಷಕರಿಗೆ ದೊರೆಯುತ್ತವೆ, ವಿದ್ಯಾರ್ಥಿಗಳು ದೇವರಂತೆ ಕಾಣುತ್ತಾರೆ ,ಅವರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ, ಅಷ್ಟೇ ಸಂಯಮದಿಂದ ಶಿಕ್ಷಕರು ಆಲಿಸುತ್ತಾರೆ ,ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣ ಕ್ಷೇತ್ರ ಪ್ರಾಮುಖ್ಯತೆ ಪಡೆದಿದೆ ಎಂದರು.
ಶಾಲೆಗಳು ಕಾರ್ಖಾನೆಯಿದ್ದಂತೆ, ರಾಜಕಾರಣಿ, ಇಂಜಿನಿಯರ್, ವೈದ್ಯ, ವಿಜ್ಞಾನಿ, ಸಮಾಜ ಸೇವಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತವೆ. ಅದಕ್ಕೆ ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚೌಡಪ್ಪ, ಶಿಕ್ಷಕರಿಗೆ ವೈಯಕ್ತಿಕ ಜೀವನವಿಲ್ಲ, ತಮ್ಮನ್ನು ತಾವು ಶಿಕ್ಷಣದಲ್ಲಿ ತೊಡಗಿಸಿಕೊಂಡಾಗ ನಿಜವಾದ ಶಿಕ್ಷಕನಾಗುತ್ತಾನೆ. ಪಾವಿತ್ರ್ಯತೆ ಇಲ್ಲದ ಶಿಕ್ಷಣ ಕೇವಲ ಕಾಗದದ ಚೂರು, ಶಿಕ್ಷಕರು, ರೈತರು- ವೈದ್ಯರು, ಸೈನಿಕರು ದೇಶದ ಭದ್ರ ಬುನಾದಿಗಳು ಮತ್ತು ಆಧಾರ ಸ್ತಂಭ. ಉತ್ತಮ ಶಿಕ್ಷಣ ನೀಡಿದಾಗ ಸಮಾಜದ ಅಭ್ಯುದಯ ಸಾಧ್ಯವೆಂದರು.
ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲೆಯ ಕಿರಿಯ, ಹಿರಿಯ , ಪ್ರೌಢಶಾಲೆಯ ಹನ್ನೆರಡು ಉತ್ತಮ ಶಿಕ್ಷಕರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳಿಗೆ ಪಾರಿತೋಷಕ ನೀಡಲಾಯಿತು.ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಡಿಡಿಪಿಐ ರೇವಣಸಿದ್ದಪ್ಪ, ತಹಸೀಲ್ದಾರ್ ಡಾ.ಜಿ.ವಿಶ್ವನಾಥ್, ತಾಪಂ ಇಒ ದೊಡ್ಡಸಿದ್ದಯ್ಯ, ಪುರಸಭಾ ಮುಖ್ಯಾಧಿಕಾರಿ ಅಮರ್ನಾರಾಯಣ್, ಶಿಕ್ಷಣಾಧಿಕಾರಿ ಅಶ್ವತ್ಥ್‌ನಾರಾಯಣ್, ಡಿವೈಪಿಸಿ ನರೇಂದ್ರ ಕುಮಾರ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಎಚ್.ವೆಂಕಟೇಶಯ್ಯ, ವಿಷಯ ಪರಿವೀಕ್ಷಕ ಎಚ್.ಚಿತ್ತಯ್ಯ, ಎಪಿಸಿ ಮಾರುತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ತಾಲೂಕು ಘಟಕದ ಅಧ್ಯಕ್ಷ ವೆಂಕಟರಂಗಾರೆಡ್ಡಿ, ಕಾರ್ಯದರ್ಶಿ ಸಂಜಯ್, ಡಯಟ್ ಪ್ರಾಂಶುಪಾಲ ವೈ.ಎನ್.ರಾಮಕೃಷ್ಣಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಪದ್ಮಾವತಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಆನಂದಕುಮಾರ್, ಪುರಸಭೆ ಸದಸ್ಯ ಕೆ.ನಾರಾಯಣ್ , ಎಂ.ಎಲ್. ಗಂಗಾರಾಜು ಇದ್ದರು.