ಜಿಲ್ಲೆ

ಪೊಲೀಸ್ ಕಾಲನಿಯಲ್ಲಿ ಶಿಕ್ಷಕರ ದಿನಾಚರಣೆ: ಶುಗರ್‌ಸಿಟಿ ಲಯನ್ಸ್ ಕ್ಲಬ್ ನಿಂದ ಸಮವಸ್ತ್ರ ವಿತರಣೆ

ಮಂಡ್ಯ: ಶುಗರ್‌ಸಿಟಿ ಲಯನ್ಸ್ ಕ್ಲಬ್ ಹಾಗೂ ಸೆಂಟೆನಿಯಲ್ ಲಯನ್ಸ್ ಕ್ಲಬ್ ಸಂಸ್ಥೆ ಸಹಯೋಗದೊಂದಿಗೆ ನಗರದ ಪೊಲೀಸ್ ಕಾಲನಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ವಿತರಣೆ ಸಮಾರಂಭ ಆಯೋಜಿಸಲಾಗಿತ್ತು.
ಲಯನ್ಸ್ ಮಾಜಿ ಪ್ರಾಂತಪಾಲ ಜಿ.ಎ.ರಮೇಶ್ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ವಿದ್ಯೆ ಕಲಿಸುವ ಜತೆ ಶಿಸ್ತು ಅಳವಡಿಸುವ ಕಾರ್ಯದಲ್ಲಿ ಗುರುಗಳ ಪಾತ್ರ ಅಪಾರ. ತಂದೆ, ತಾಯಿ ಎಷ್ಟೇ ವಿದ್ಯಾವಂತರಾಗಿದ್ದರೂ ಶಿಸ್ತು ಕಲಿಸಲು ಸಾಧ್ಯವಿಲ್ಲ. ಅದನ್ನು ಗುರುಗಳಿಂದ ಮಾತ್ರ ಕಲಿಯಲು ಸಾಧ್ಯ. ಪ್ರಜಾಪ್ರಭುತ್ವದ ನಮ್ಮ ದೇಶದಲ್ಲಿ ಯಾರು ಬೇಕಾದರೂ ಯಾವ ಸಾಧನೆಯನ್ನು ಮಾಡುವ ಅವಕಾಶವಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ಸೆಂಟೆನಿಯಲ್ ಲಯನ್ಸ್ ಕ್ಲಬ್‌ನ ಸಂಸ್ಥಾಪಕಿ ಪ್ರತಿಮಾ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಮಹದೇವಸ್ವಾಮಿ, ಉಪನ್ಯಾಸಕರಾದ ಲಿಂಗೇಗೌಡ, ಸುದೀಪ್, ಲಯನ್ಸ್ ಸಂಸ್ಥೆಯ ಮೀನಾಕ್ಷಿ ಆನಂದ್, ನಿತ್ಯಾನಂದ, ಮೋಹನ್‌ಕುಮಾರ್ ಇತರರಿದ್ದರು.
ಇದೇ ಸಂದರ್ಭದಲ್ಲಿ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಅಂತಿಮ ವರ್ಷದ ಸಂಜನಾ ಎಂಬ ವಿದ್ಯಾರ್ಥಿನಿಗೆ ಉಚಿತ ಲ್ಯಾಪ್‌ಟ್ಯಾಪ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಕಾಲೇಜಿನ ಹಿರಿಯ ಉಪನ್ಯಾಸಕರಾದ ಗೀತಾ ಹಾಗೂ ಮೋಹನ್‌ಕುಮಾರ್ ಅವರನ್ನು ಅಭಿನಂದಿಸಲಾಯಿತು.