ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಹಾಗೂ ಜೀವಿಸಲು ಭಾರತದಂಥ ಅತ್ಯುತ್ತಮ ದೇಶ ಇನ್ನೊಂದಿಲ್ಲ ಎನ್ನುವುದನ್ನು ಮಕ್ಕಳಿಗೆ ತಿಳಿಹೇಳುವ ಕಾರ್ಯ ಶಿಕ್ಷಕರು ಮಾಡಬೇಕು, ಶಿಕ್ಷಕರಿಗೆ ಇರುವ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ದ.ಕ.ಜಿಪಂ ಶಾಲಾ ಶಿಕ್ಷಣ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಆಶ್ರಯದಲ್ಲಿ ಶುಕ್ರವಾರ ಜಪ್ಪಿನಮೊಗರು ಪ್ರೆಸ್ಟೀಜ್ ಶಾಲಾ ಸಭಾಂಗಣದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಮತ್ತು ಶಿಕ್ಷಕರ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ತಾಲೂಕುಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ ರೈ ಹಾಗೂ ನಯನಾ ಕೆ. ಅವರನ್ನು ಸನ್ಮಾನಿಸಲಾಯಿತು. 56 ಮಂದಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.
ಮಂಗಳೂರು ಶಿಕ್ಷಣ ಶಿಕ್ಷಕರ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಶಿವಪ್ರಕಾಶ್ ದಿಕ್ಸೂಚಿ ಭಾಷಣ ಮಾಡಿದರು. ಶಾಸಕ ವೇದವ್ಯಾಸ ಕಾಮತ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಂಚಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಅನುದಾನಿತ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ, ಚಿತ್ರಕಲಾ ಶಿಕ್ಷಕರ ಸಂಘ ಅಧ್ಯಕ್ಷ ರಫೀಕ್ ತುಂಬೆ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘ ಅಧ್ಯಕ್ಷೆ ಜಯವಂತಿ ಸೋನ್ಸ್, ಸಿಬಿಎಸ್ಸಿ ಶಾಲಾ ಉಸ್ತುವಾರಿ ನವಾಝ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ಶೇಖರ್ ಕಡ್ತಲ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಗೀತಾ, ಪ್ರೌಢಶಾಲಾ ಸಹಶಿಕ್ಷಕರ ಸಂಘ ಅಧ್ಯಕ್ಷೆ ಪ್ರಮೀಳಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾರ್ಯದರ್ಶಿ ರಾಧಾಕೃಷ್ಣ ರಾವ್ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಸ್ವಾಗತಿಸಿ. ಬಿಆರ್‌ಪಿ ತಹಸೀನ ಸನ್ಮಾನಪತ್ರ ವಾಚಿಸಿದರು. ಪ್ರಭಾರ ಸಮನ್ವಯಾಧಿಕಾರಿ ಸುಷ್ಮಾ ವಿ.ಕಿಣಿ ವಂದಿಸಿ, ಶಿಕ್ಷಕರಾದ ರಾಜೀವ ನಾಯಕ್ ಹಾಗೂ ಜಯಶ್ರೀ ನಾಯಕ್ ನಿರೂಪಿಸಿದರು.
ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಎಲ್ಲವೂ ಸರಿಯಿದೆ ಎನ್ನುವಂತಿಲ್ಲ. ಶಿಕ್ಷಕರ ಸಮಸ್ಯೆ ನೀಗಿಸಲು ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳದ ಅಧಿಕಾರಶಾಹಿಗಳ ನಿರ್ಲಕ್ಷೃತನದಿಂದ ಸಮಸ್ಯೆ ಉಂಟಾಗಿದೆಯೇ ಹೊರತು ಸರ್ಕಾರವನ್ನು ದೂರಿ ಪ್ರಯೋಜನವಿಲ್ಲ. ಕೇರಳ ಶಾಲೆಗಳಲ್ಲಿ ಶಿಕ್ಷಕರು ನಿವೃತ್ತರಾದ ಮರುದಿನವೇ ಹೊಸ ಶಿಕ್ಷಕರ ನೇಮಕ ಆಗುತ್ತದೆ, ಆದರೆ ಕರ್ನಾಟಕದಲ್ಲಿ 70 ಸಾವಿರಕ್ಕೂ ಅಧಿಕ ಶಿಕ್ಷಕ ಹುದ್ದೆ ಖಾಲಿಯಿದೆ. ನಾಲ್ಕು ತರಗತಿಗಳಿಗೆ ಒಂದೇ ಶಿಕ್ಷಕರು ಪಾಠ ಮಾಡುವುದು ಹೇಗೆ?. ಡಾ.ಶಿವಪ್ರಸಾದ್ ನಿವೃತ್ತ ಪ್ರಾಧ್ಯಾಪಕ, ಶಿಕ್ಷಕರ ತರಬೇತಿ ಕೇಂದ್ರ