ಜಿಲ್ಲೆ

ವಿದ್ಯಾರ್ಥಿಗಳ ಬದುಕಿಗೆ ಶಿಕ್ಷಣ ಅಡಿಪಾಯ : ಇತಿಹಾಸ ತಜ್ಞ ಪುಂಡಿಕಾಯ್ ಗಣಪಯ್ಯ ಭಟ್ ಹೇಳಿಕೆ

ಸೌಮ್ಯ ಆರ್

ಮೂಡುಬಿದಿರೆ: ದೇಶದಲ್ಲಿ ಕ್ರಾಂತಿಯಾಗದ ಕ್ಷೇತ್ರ ಇವತ್ತಿಗೂ ಉಳಿದಿದ್ದರೆ ಅದು ಶಿಕ್ಷಣ ಕ್ಷೇತ್ರ ಮಾತ್ರ. ವಿದ್ಯಾರ್ಥಿಗಳ ಬದುಕಿನ ಅಡಿಪಾಯ ಎನಿಸಿಕೊಂಡ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ ವ್ಯವಸ್ಥೆಯಲ್ಲಿ ಇನ್ನೂ ಸರಿಯಾದ ರೀತಿಯ ಕ್ರಾಂತಿ ಆಗದೆ ಪ್ರಯೋಗ ಶಾಲೆಯಾಗಿಯೇ ಉಳಿದಿದೆ ಎಂದು ಇತಿಹಾಸ ತಜ್ಞ ಪುಂಡಿಕಾಯ್ ಗಣಪಯ್ಯ ಭಟ್ ಹೇಳಿದರು.

ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಶುಕ್ರವಾರ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಲ್ಪಿಯೊಬ್ಬ ಕಲ್ಲನ್ನು ಮೂರ್ತಿಯನ್ನಾಗಿಸುವಂತೆ, ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿ ಸಮಾಜಕ್ಕೆ ಅರ್ಪಿಸುತ್ತಾರೆ. ಅಂತಹ ಶಿಕ್ಷಕರು ಸದಾ ಸ್ಮರಣೀಯರು ಎಂದರು.

ಕಳೆದ ಸಾಲಿನಲ್ಲಿ ರಾಜ್ಯ ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಉದ್ಯಮಿ ಶ್ರೀಪತಿ ಭಟ್, ತಾಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಬಿ., ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುಚರಿತ ಶೆಟ್ಟಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಶ್ರೀನಿವಾಸ್, ಸೀಮಾ ನಾಯಕ್, ದೊರೆಸ್ವಾಮಿ, ಸುಧಾಕರ ಸಾಲ್ಯಾನ್, ಶಿವಾನಂದ ಕಾಯ್ಕಿಣಿ, ರೊನಾಲ್ಡ್ ಡಿಸೋಜ, ಶಶಿಕಾಂತ್ ಜೈನ್, ನವೀನ್ ಪುತ್ರನ್, ಚಂದ್ರು ಮೊದಲಾದವರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಸ್ವಾಗತಿಸಿದರು. ನವೀನ್ ಅಂಬೂರಿ ನಿರೂಪಿಸಿದರು. ಸೌಮ್ಯ ವಂದಿಸಿದರು.