ಜಿಲ್ಲೆ

ಅಧ್ಯಾಪಕರಲ್ಲಿ ದೇಶದ ಭವಿಷ್ಯ ಬದಲಿಸುವ ಶಕ್ತಿ : ರಾಜೇಶ್ ನೈಾಕ್ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಶಿಕ್ಷಕ ವೃತ್ತಿಗೆ ದೇಶದ ಭವಿಷ್ಯ ಬದಲಿಸುವ ಶಕ್ತಿ ಇದ್ದು, ಮುಂದಿನ ಪೀಳಿಗೆಯನ್ನು ಹೆಚ್ಚು ಶಕ್ತಿಯುತವಾಗಿ ರೂಪಿಸುವ ಹೊಣೆಗಾರಿಕೆ ಇದೆ. ಅಂತಹ ಗೌರವಾನ್ವಿತ ಹುದ್ದೆಯನ್ನು ನಿರ್ವಹಿಸುವ ಶಿಕ್ಷಕರು ಈಗಾಗಲೇ ಸಾಕಷ್ಟು ಸಾಧಕರನ್ನು ಸಮಾಜಕ್ಕೆ ನೀಡಿದ್ದು, ಇದು ನಿರಂತರವಾಗಿ ಮುಂದುವರಿಯಬೇಕಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ಹೇಳಿದರು.

ಮೊಡಂಕಾಪುವಿನಲ್ಲಿ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ನೆನಪಲ್ಲಿ ಆಯೋಜಿಸಲಾದ ಬಂಟ್ವಾಳ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಾಸು ಪೂಜಾರಿ ಲೊರೆಟ್ಟೊ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್‌ಕುಮಾರ್, ವಿಟ್ಲ ಅಧ್ಯಾಪಕರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ನಾಯಕ್ ರಾಯಿ, ಮೊಡಂಕಾಪು ಇನ್ಫೆಂಟ್ ಜೀಸಸ್ ಶಿಕ್ಷಣ ಸಂಸ್ಥೆಗಳ ಜತೆ ಕಾರ್ಯದರ್ಶಿ ವಿಕ್ಟರ್ ಡಿಸೋಜ, ಮುಖ್ಯಶಿಕ್ಷಕ ಮೆಲ್ವಿನ್ ಲೋಬೋ, ಕ್ಷೇತ್ರ ಸಮನ್ವಯಾಧಿಕಾರಿ ವಿದ್ಯಾಕುಮಾರಿ, ದೈಹಿಕ ಶಿಕ್ಷಣ ಪರಿವೀಕ್ಷಕಿ ಆಶಾ ನಾಯಕ್, ಬಿಇಒ ಕಚೇರಿ ಪತ್ರಾಂಕಿತ ವ್ಯವಸ್ಥಾಪಕಿ ಹರಿಣಾಕ್ಷಿ, ಆಚರಣಾ ಸಮಿತಿ ಅಧ್ಯಕ್ಷ ಜಯರಾಮ, ನೋಡಲ್ ಅಧಿಕಾರಿ ಪ್ರತಿಮಾ, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಜೊಯಲ್ ಮೆಂಡೊನ್ಸಾ, ಶಿವಪ್ರಸಾದ್ ರೈ, ಗುರುರಾಜ್, ಕಿರಣ್‌ಕುಮಾರ್, ಲ್ಯಾನ್ಸಿ, ರಾಜೇಂದ್ರ ರೈ, ನವೀನ್ ರೈ, ಮಾಲತಿ, ಗೀತಾ, ಮುರಳಿಕೃಷ್ಣ ರಾವ್ ಮೊದಲಾದವರಿದ್ದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಸ್ವಾಗತಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಐವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ನಾಟಿ ಸರ್ಕಾರಿ ಶಾಲೆಯ ಪ್ರಭಾವತಿ, ಕಲ್ಲಡ್ಕ ಸರ್ಕಾರಿ ಶಾಲೆಯ ಸವಿತಾ ರಾಮಕೃಷ್ಣ ಭಟ್, ಪಂಜಿಕಲ್ಲು ಸರ್ಕಾರಿ ಶಾಲೆಯ ಮ್ಯಾಗ್ನೆಟ್ ಮೆರ್ಲಿನ್ ಡಿಸೋಜ, ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯ ತೆರೆಸಾ ಎಲ್.ಡಿಮೆಲ್ಲೊ ಹಾಗೂ ತುಂಬೆ ಬಿ.ಎ. ವಿದ್ಯಾಸಂಸ್ಥೆಯ ಜಗದೀಶ್ ರೈ ಅವರಿಗೆ ತಾಲೂಕುಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಸಂಯೋಜಕಿ ಸುಧಾ ಕ್ಷಕರ ವಿವರ ನೀಡಿದರು.