ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾ ಆಯ್ಕೆ ಸಮಿತಿಯು ಪ್ರಸಕ್ತ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗದಿಂದ ಶಿಕ್ಷಕರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿಗೆ ಜಿಲ್ಲೆಯ ನಾಲ್ಕೂ ತಾಲೂಕುಗಳಿಂದ 12 ಶಿಕ್ಷಕರು ಆಯ್ಕೆಯಾಗಿದ್ದಾರೆ. ಶಿಕ್ಷಕರ ದಿನಾಚರಣೆ ಪ್ರಯುಕ್ತ ದೇವನಹಳ್ಳಿ ಟೌನ್‌ನಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ದೇವನಹಳ್ಳಿ ತಾಲೂಕು ಶೆಟ್ಟರಹಳ್ಳಿ ಸಹಶಿಕ್ಷಕ ಪಿಳ್ಳರಾಜು, ದೊಡ್ಡಬಳ್ಳಾಪುರ ತಾಲೂಕು ತಿಮ್ಮಸಂದ್ರ ಶಾಲೆಯ ಶಿಕ್ಷಕಿ ಸುಜಾತಾ, ಹೊಸಕೋಟೆಯ ಸಹಶಿಕ್ಷಕ ಮಂಜುನಾಥ್, ನೆಲಮಂಗಲ ಸಹಶಿಕ್ಷಕಿ ಯಶೋಧಾ ಅವರಿಗೆ ಪ್ರಶಸ್ತಿ ಒಲಿದಿದೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ದೇವನಹಳ್ಳಿಯ ಕೆ.ಬಿ.ಶಶಿಕಲಾ, ದೊಡ್ಡಬಳ್ಳಾಪುರ ಮುಖ್ಯಶಿಕ್ಷಕ ವಿ.ಶ್ರೀನಿವಾಸ್, ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಸಹ ಶಿಕ್ಷಕಿ ಲಲಿತಮ್ಮಾ ಹಾಗೂ ನೆಲಮಂಗಲ ನರಸೀಪುರ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಹೊನ್ನಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಾಢಶಾಲಾ ವಿಭಾಗದಿಂದ ದೇವನಹಳ್ಳಿ ತಾಲೂಕು ಸಾದನಹಳ್ಳಿ ಶಾಲೆ ಸಹಶಿಕ್ಷಕಿ ಆರ್.ಪ್ರತಿಮಾ, ದೊಡ್ಡಬಳ್ಳಾಪುರ ಅರಳುಮಲ್ಲಿಗೆ ಶಾಲೆ ಸಹ ಶಿಕ್ಷಕ ಎಚ್.ಎನ್.ಪ್ರಕಾಶ್, ಹೊಸಕೋಟೆಯ ಸಿದ್ದಗಂಗಯ್ಯ ಹಾಗೂ ನೆಲಮಂಗಲ ತಾಲೂಕು ಯಂಟಗಾನಹಳ್ಳಿ ಶಾಲೆ ಹಿಂದಿ ಭಾಷಾ ಶಿಕ್ಷಕಿ ಸಿ.ಎನ್.ಸುಧಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಮೂರು ವಿಭಾಗದಿಂದ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ ಗುಣಮಟ್ಟದ ಶಿಕ್ಷಣದ ಜತೆಗೆ ವಿಶೇಷ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಶಿಕ್ಷಕರನ್ನು ಜಿಲ್ಲಾ ಆಯ್ಕೆ ಸಮಿತಿ ಗುರುತಿಸಿ ಆಯ್ಕೆ ಮಾಡಿದೆ. ಈ ಪ್ರಶಸ್ತಿಗಳು ಶಿಕ್ಷಕರಲ್ಲಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸುತ್ತದೆ. ಇತರರಿಗೂ ಪ್ರೇರಣೆಯಾಗುತ್ತದೆ. ಆಯ್ಕೆಯಾದ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯಂದು ದೇವನಹಳ್ಳಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
ಕೃಷ್ಣಮೂರ್ತಿ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂ.ಗ್ರಾಮಾಂತರ