ಜಿಲ್ಲೆ

ಉಪನ್ಯಾಸಕಿ ಅಮಾನತಿಗೆ ಖಂಡನೆ, ಶಿಕ್ಷಕರ ಸಂಘಗಳಿಂದ ಮರು ನೇಮಕಕ್ಕೆ ಆಗ್ರಹ

ಹುಬ್ಬಳ್ಳಿ: ಇಲ್ಲಿಯ ಹೊಸೂರ ವಿದ್ಯಾನಗರದಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಕನ್ನಡ ಉಪನ್ಯಾಸಕಿಯನ್ನು ಶಾಲಾ ಶಿಕ್ಷಣ ಇಲಾಖೆಯ ಅನುಮತಿ ಪಡೆಯದೇ ಸೇವೆಯಿಂದ ಅಮಾನತು ಮಾಡಿರುವುದನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂದ ಕಾರ್ಯದರ್ಶಿ ಸಂದೀಪ ಬೂದಿಹಾಳ, ಉಪನ್ಯಾಸಕಿಯಾಗಿದ್ದ ಡಾ. ಸರ್ವಮಂಗಳಾ ಕುದರಿ ಅವರು ನಿಯಮದ ಪ್ರಕಾರ ಅಲ್ಲಿನ ಪ್ರಾಚಾರ್ಯರಾಗಬೇಕಾಗಿತ್ತು. ಆದರೆ, ಅಲ್ಲಿನ ಆಡಳಿತ ಮಂಡಳಿಯು ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನಿಯಮಬಾಹಿರವಾಗಿ ಅಮಾನತು ಮಾಡಿದೆ ಎಂದು ದೂರಿದರು.

ಜೇಷ್ಠತಾ ನಿಯಮದ ಪ್ರಕಾರ ಕಾಲೇಜಿನ ಪ್ರಾಂಶುಪಾಲರ ಹುದ್ದೆಗೆ ಸರ್ವಮಂಗಳಾ ಅರ್ಹರಾಗಿದ್ದಾರೆ. ಆದರೆ, ಕಿರಿಯರಿಗೆ ಪದೋನ್ನತಿ ನೀಡಲಾಗಿದೆ. ಇದನ್ನು ಪ್ರಶ್ನಿಸಿದ್ದ ಕುದರಿ ಅವರಿಗೆ ಅಮಾನತು ಶಿಕ್ಷೆ ನೀಡಲಾಗಿದೆ. ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದ್ದು, ಇಲಾಖೆಯು ಸಹ ಕುದರಿ ಅವರನ್ನು ಪ್ರಭಾರಿ ಪ್ರಾಂಶುಪಾಲರಾಗಿ ಬಡ್ತಿ ನಿಡಲು ಆದೇಶ ನೀಡಿದೆ. ಇದ್ಯಾವುದನ್ನೂ ಆಡಳಿತ ಮಂಡಳಿ ಲೆಕ್ಕಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯರನ್ನು ಬಿಟ್ಟು ಕಿರಿಯರಿಗೆ ಮಣೆ ಹಾಕುವ ಇಂತಹ ಸಂಸ್ಕೃತಿ ಸಹಿಸುವುದಿಲ್ಲ. ಇದೇ ಪದ್ಧತಿಯನ್ನು ಸರ್ಕಾರದ ಅನುದಾನ ಪಡೆಯುತ್ತಿರುವ ಇತರ ಶಿಕ್ಷಣ ಸಂಸ್ಥೆಗಳು ಅನುಸರಿಸಿದರೆ ಪ್ರತಿಭಾವಂತರು, ಹಿರಿಯರಿಗೆ ಅನ್ಯಾಯವಾಗುತ್ತದೆ ಎಂದು ಮಾಧ್ಯಮಿಕ ಶಾಲಾ ನೌಕರರ ಸಂದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ ಆತಂಕ ವ್ಯಕ್ತಪಡಿಸಿದರು.

ಸೆಪ್ಟೆಂಬರ್ 5ರೊಳಗೆ ಆಡಳಿತ ಮಂಡಳಿಯು ಕೂಡಲೇ ಸರ್ವಮಂಗಳಾ ಅವರನ್ನು ಮರು ನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಿ.ಇಡಿ. ಕಾಲೇಜು ನೌಕರರ ಸಂಘದ ಅಧ್ಯಕ್ಷ ಡಾ. ಎಚ್.ವಿ. ಬೆಳಗಲಿ, ಪ್ರಾಚಾರ್ಯ ಬಿ.ಎಂ. ಸಾಲಿಮಠ, ವಿವಿಧ ಸಂಘಟನೆಗಳ ಬಿ.ಕೆ. ಮಳಗಿ, ಎಸ್. ಸುಬ್ಬರಾವ್ ಎಚ್ಚರಿಕೆ ನೀಡಿದರು.