ಬೀರೂರು: ಶಿಕ್ಷಕರು ರಾಷ್ಟ್ರದ ಭವಿಷ್ಯದ ನಿಜವಾದ ನಿರ್ಮಾಪಕರು, ವಿದ್ಯಾರ್ಥಿಗಳ ಜೀವನವನ್ನು ರೂಪಿಸುವವರು, ಅವರು ಅಂತಿಮವಾಗಿ ರಾಷ್ಟ್ರದ ಭವಿಷ್ಯದ ಮೇಲೆ ಪ್ರಭಾವ ಬೀರುತ್ತಾರೆ ಎಂಬುದನ್ನು ನಿರೂಪಿಸಿದವರು ಡಾ. ಸರ್ವಪಲ್ಲಿ ರಾಧಾಕಷ್ಣನ್‌ರವರು ಎಂದು ಅಗ್ನಿ ಶಾಮಕ ವಿಭಾಗದ ಡಿಐಜಿ ರವಿ ಡಿ.ಚೆನ್ನಣ್ಣನವರ್ ಹೇಳಿದರು.
ಪಟ್ಟಣದ ಡಾ.ಸರ್ವಪಲ್ಲಿ ಎಸ್.ರಾಧಾಕೃಷ್ಣನ್ ಗುರುಭವನದಲ್ಲಿ ಮಂಗಳವಾರ ಬೀರೂರು ಶೈಕ್ಷಣಿಕ ತಾಲೂಕು ಮಟ್ಟದ 64ನೇ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರು ಮಹತ್ತರ ಪಾತ್ರವಹಿಸುತ್ತಾರೆ. ಜ್ಞಾನ ನೀಡುವ ಜತೆಗೆ ನಮ್ಮ ವ್ಯಕ್ತಿತ್ವ, ಆತ್ಮವಿಶ್ವಾಸದ ಮಟ್ಟಗಳು ಮತ್ತು ಕೌಶಲ್ಯಗಳನ್ನು ವೃದ್ಧಿಸುವಲ್ಲಿ ನಮಗೆ ಪ್ರೇರಣೆಯಾಗಿದ್ದಾರೆ ಎಂದರು.
ಕಲಿಕೆಯ ಹಂತದಲ್ಲಿ ನಮಗೆ ಅಡಿಪಾಯ ಹಾಕಿದ ಪ್ರಾಥಮಿಕ ಶಾಲೆಗಳು. ಶೈಕ್ಷಣಿಕ ಹಂತದಲ್ಲಿ ಭದ್ರ ಬುನಾದಿ ನಿರ್ಮಿಸಲು ಸಹಕಾರಿಯಾಗಿರುತ್ತದೆ. ಆದ್ದರಿಂದ ಅದು ನಮ್ಮ ನೆನಪಿನಲ್ಲಿ ಸದಾ ಇರುತ್ತದೆ. ಸದೃಢ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಪ್ರಮುಖವಾಗಿದ್ದು, ಇಂದಿನ ವ್ಯವಸ್ಥೆಯಲ್ಲಿ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗಿದೆ. ಒತ್ತಡದ ಮೂಲಕ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಕಷ್ಟಸಾಧ್ಯ ಎಂದರು.
ನಿವತ್ತ ಶಿಕ್ಷಕರು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಶಿಕ್ಷಕರ ಮಕ್ಕಳನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್, ಸದಸ್ಯರಾದ ವನಿತಾ ಮಧು ಬಾವಿಮನೆ, ಮಾನಿಕ್ ಬಾಷಾ, ಕ್ಷೇತ್ರ ಸಮನ್ವಯ ಅಧಿಕಾರಿ ಶೇಖರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಗದೀಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಜಯದೇವಪ್ಪ, ಕಾರ್ಯದರ್ಶಿ ರಾಜಕುಮಾರ್, ಬಸಪ್ಪ, ಆರ್.ಟಿ.ಅಶೋಕ್, ಟಿ.ಕೃಷ್ಣಮೂರ್ತಿ, ವಸಂತ, ಚಂದ್ರಪ್ಪ, ಮಾದಯ್ಯ, ಗೀತಾ, ಮೈಲಾರಪ್ಪ, ಉಮಾ ಮಹೇಶ್ ಇದ್ದರು.