ಜಿಲ್ಲೆ

ಬಗೆಹರಿಯದ ಸರ್ವರ್​ಗೆ ಶಿಕ್ಷಕರು ಹೈರಾಣ!

ಸುಡು ಬಿಸಿಲಿಗೆ ಸುಸ್ತಾದ ಗಣತಿದಾರರು | ರಾತ್ರಿ 9ಗಂಟೆಯಾದರೂ ಮುಗಿಯದ ಅಧಿಕಾರಿಗಳ ಸಭೆ

ಬಂಗಾರಪೇಟೆ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಎದುರಾಗುತ್ತಿರುವ ಸರ್ವರ್​ ಸಮಸ್ಯೆಯಿಂದ ಗಣತಿದಾರರು ಹೈರಾಣರಾಗಿದ್ದಾರೆ. ನಿಗದಿತ ಸಮಯದೊಳಗೆನಿತ್ಯ ನೀಡಿರುವ ಟಾರ್ಗೆಟ್​ ಸಾಧನೆಗೆ ಎಷ್ಟೇ ಪ್ರಯತ್ನಿಸಿದರೂ ಸರ್ವರ್​ ಸ್ಪಂದಿಸುತ್ತಿಲ್ಲ. ಏತನ್ಮಧ್ಯೆ ಗಣತಿದಾರರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ.

ಸಮೀಕ್ಷೆಗೆ ಶಿಕ್ಷಕರು, ಪುರಸಭೆ ಸಿಬ್ಬಂದಿ, ಕಂದಾಯ ಇಲಾಖೆ, ತಾಪಂ ಅಧಿಕಾರಿಗಳು ಸೇರಿ ಬೇರೆ ಬೇರೆ ಇಲಾಖೆ ಅಧಿಕಾರಿಗಳನ್ನು ಬಳಸಿಕೊಂಡು ನಿಗದಿತ ಸಮಯದೊಳಗೆಗಣತಿ ಮುಗಿಸಲು ಎಲ್ಲ ಪ್ರಯತ್ನ ನಡೆಸುತ್ತಿದ್ದಾರೆ. ನಗರದ ಮನೆಯ ಲೊಕೇಷನ್​ ಒಂದು ಕಡೆ ತೋರಿಸಿದರೆ, ಮನೆ ಇರೋದು ಮತ್ತೊಂದು ಕಡೆ. ಲೊಕೇಷನ್​ ಪ್ರಕಾರ ಸ್ಥಳಕ್ಕೆ ಹೋಗಿ ಮತ್ತೆ ಮನೆ ಕಡೆ ವಾಪಸ್​ ಬಂದರೆ, ಮತ್ತೆ ಮೊದಲಿನಿಂದ ಸಮೀಕ್ಷೆ ಮಾಡಬೇಕಾಗಿದೆ. ಇದರಿಂದ ಗಣತಿದಾರರು ಸುಸ್ತಾಗಿದ್ದಾರೆ. ಇನ್ನುಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್​ ಸಮಸ್ಯೆ ತೀವ್ರವಾಗಿರುವುದರಿಂದ ಆ್ಯಪ್​ ಓಪನ್​ ಮಾಡಿದ ತಕ್ಷಣ ನೆಟ್​ವರ್ಕ್​ ಸಿಗದೆ ಸುತ್ತುತ್ತಲೇ ಇರುತ್ತದೆ. ಇದು ಗಣತಿದಾರರಿಗೆ ತಲೆ ಬಿಸಿ ತರುವಂತಾಗಿದೆ.

ಟಾರ್ಗೆಟ್​ ತಲುಪಲು ಹಿನ್ನಡೆ: ಮೊದಲೇ ನೆತ್ತಿ ಮೇಲೆ ಸುಡು ಬಿಸಿಲಿನ ನಡುವೆಸರ್ವರ್​ ಸಮಸ್ಯೆಯಿಂದಗಣತಿದಾರರು ಬೆವರು ಸುರಿಸುತ್ತಿದೆ. ದಿನಕ್ಕೆ 10 ಮನೆ ಟಾರ್ಗೆಟ್​ ನೀಡಿದ್ದರೂ ಸಹ ಸಮಸ್ಯೆಯಿಂದ ನಲುಗುವಂತಾಗಿದೆ. ಭಾನುವಾರ ಸುಮಾರು 26 ಮಂದಿ ಲಾಗಿನ್​ ಆಗದ ಕಾರಣ ಹಾಗೂಇಡೀ ದಿನ ಪವರ್​ ಕಟ್​ ಆಗಿದ್ದರಿಂದ ಟಾರ್ಗೆಟ್​ ರೀಚ್​ ಆಗಲಿಲ್ಲ.

ಇದುವರೆಗೆ ಬಂಗಾರಪೇಟೆ ತಾಲೂಕಿನಲ್ಲಿ 19,699 ಮನೆಗಳ ಗಣತಿ ಸಮೀಕ್ಷೆ ನಡೆದಿದೆ. ಎಲ್ಲ ಗಣತಿದಾರರು ಲಾಗಿನ್​ ಮಾಡಿ ಗಣತಿಯಲ್ಲಿ ಪಾಲ್ಗೊಂಡಿದ್ದಾರೆ.

| ಸುಜಾತಾ

ತಹಸೀಲ್ದಾರ್​

ನಿತ್ಯ ತಹಸೀಲ್ದಾರ್​ ಸಭೆ: ಪ್ರತಿದಿನ ತಹಸೀಲ್ದಾರ್​ ಸುಜಾತಾ ಮತ್ತು ತಾಪಂ ಇಒ ರವಿಕುಮಾರ್​ ರವರ ನೇತೃತ್ವದಲ್ಲಿ ತಹಸೀಲ್ದಾರ್​ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಗಣತಿ ಸಮೀಕ್ಷೆ ಟಾರ್ಗೆಟ್​ಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು, ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ಕಚೇರಿಯಲ್ಲಿ ಸಿಬ್ಬಂದಿಯೊಂದಿಗೆ ಗಣತಿದಾರರ ಸಮೀಕ್ಷೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಈಗ ಸಮೀಕ್ಷೆ ಚುರುಕು ಪಡೆದುಕೊಂಡಿದೆ. ತಹಸೀಲ್ದಾರ್​ ಸುಜಾತ ಅವರ ಖಡಕ್​ ಸೂಚನೆಗೆ ಎಲ್ಲ ಗಣತಿದಾರರು ಸೋಮವಾರ ಲಾಗಿನ್​ ಮಾಡಿರುವುದು ಗಮನಾರ್ಹ.ಬೆರಳೆಣಿಕೆ ಸ್ಥಳಗಳಲ್ಲಿ ಸರ್ವರ್​ ಸಮಸ್ಯೆಯಿಂದ ಶೂನ್ಯ ಫಲಿತಾಂಶ ಬಂದಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.