ಸಾಗರ: ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಕರು ಮತ್ತು ಅಭಿಯಂತರ ಪಾತ್ರ ದೊಡ್ಡದು. ಅವರ ಸೇವೆಯನ್ನು ಗುರುತಿಸಿ ಗೌರವಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ.ಪರಮೇಶ್ವರಪ್ಪ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯು ಶಿಕ್ಷಕರ ಹಾಗೂ ಅಭಿಯಂತರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಉನ್ನತ ಸ್ಥಾನಕ್ಕೆ ಹೋದವರ ಎಲ್ಲರ ಹಿಂದೆಯೂ ಶಿಕ್ಷಕರ ನೆರಳು ಇರುತ್ತದೆ. ಸಮಾಜವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ. ಅಂತಹ ಶಿಕ್ಷಕರ ಸಾಧನೆಯನ್ನು ಗಮನಿಸಿ ಸರ್ಕಾರ ಮತ್ತು ಜಿಲ್ಲಾಡಳಿತ ಪ್ರಶಸ್ತಿ ನೀಡುವ ಮೂಲಕ ಅವರಿಗೆ ಇನ್ನಷ್ಟು ಉತ್ತೇಜನ ನೀಡಿದೆ. ಸರ್ಕಾರಿ ನೌಕರರ ಸಂಘವು ಪ್ರತಿವರ್ಷ ಸಾಧಕ ಶಿಕ್ಷಕರು ಮತ್ತು ಅಭಿಯಂತರರನ್ನು ಗೌರವಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಪ್ರಶಸ್ತಿ ಮತ್ತು ಸನ್ಮಾನ ಪಡೆದವರ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಬಿ.ಎನ್.ಮಂಜುನಾಥ್, ನಾವು ಉನ್ನತ ಸ್ಥಾನಕ್ಕೆ ಹೋಗಲು ಶಿಕ್ಷಕರು ನೀಡಿರುವ ಜ್ಞಾನಧಾರೆ ಅತಿಮುಖ್ಯವಾದದ್ದು. ಅಂತಹ ಶಿಕ್ಷಕರ ಜತೆ ನಮ್ಮನ್ನು ಗೌರವಿಸಿರುವುದು ಸಂತೋಷ ತರುತ್ತಿದೆ. ಶಿಕ್ಷಕರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮಾದರಿಯಾದರೆ, ಅಭಿಯಂತರರಿಗೆ ಸರ್ ಎಂ.ವಿಶ್ವೇಶ್ವರಯ್ಯ ಮಾದರಿ ಆಗಿದ್ದಾರೆ ಎಂದು ಹೇಳಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವಿಜಯಾನಂದ ರಾವ್, ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮನೋಹರಪ್ಪ, ದತ್ತಾತ್ರೇಯ ಭಟ್, ಹರಿಪ್ರಸಾದ್, ಸೌಭಾಗ್ಯಾ, ಬಸವರಾಜ್, ಅಭಿಯಂತರರಾದ ಬಿ.ಎನ್.ಮಂಜುನಾಥ್, ಜಯರಾಮ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಜಿ.ಬಸವರಾಜ್, ಖಜಾಂಚಿ ವಿ.ಚಂದ್ರಶೇಖರ್, ಕಾರ್ಯದರ್ಶಿ ರಾಘವೇಂದ್ರ ಕುಮಾರ್, ಲಕ್ಷ್ಮಣ್ ಆರ್. ನಾಯ್ಕ, ಎಲ್.ಎಂ.ಹೆಗಡೆ, ರಾಜಾರಾಮ ಭಟ್, ಲಕ್ಷ್ಮೀ ಭಾಗವತ್, ಸೋಮಪ್ಪ, ಲೋಹಿತ್, ಉಮೇಶ್ ಹಿರೇನೆಲ್ಲೂರು, ಸೋಮರಾಜ್, ಪಾಲಾಕ್ಷಪ್ಪ, ನಾಗರಾಜ್, ರಮೇಶ್ ಇತರರಿದ್ದರು.