ಜಿಲ್ಲೆ

ಶಾಲೆಯಲ್ಲಿ ಗುರು-ಶಿಷ್ಯರ ಸಮಾಗಮ

ಅಭಿನಯ್ ಎಚ್.ಎಂ

ಕಿಕ್ಕೇರಿ: ಪಾಠ ಹೇಳಿದ ಗುರುಗಳಿಗೆ ಗುರುವಂದನೆ ಸಲ್ಲಿಸುವುದರ ಜತೆಗೆ ಪರಸ್ಪರ ಹರಟೆ ಮೂಲಕ ವಿದ್ಯಾರ್ಥಿಗಳು ಹಾಗೂ ಗುರುಗಳು ಸಂತಸ ಹಂಚಿಕೊಂಡರು.

ಇಲ್ಲಿನ ಸರ್ಕಾರಿ ಪ್ರೌಢಶಾಲೆ(ಕೆಪಿಎಸ್)ಯಲ್ಲಿ 2003-04ನೇ ಸಾಲಿನಲ್ಲಿ ಓದಿದ ವಿದ್ಯಾರ್ಥಿಗಳು ಕೆಪಿಎಸ್ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಗುರುಗಳ ಜತೆಗಿನ ಬಾಂಧವ್ಯ, ಬೆದರಿಕೆ, ತುಂಟಾಟ, ಬೆತ್ತದ ರುಚಿ, ಕುಣಿದು ಕುಪ್ಪಳಿಸಿದ ಹತ್ತಾರು ಮಜಲುಗಳನ್ನು ಮೆಲುಕು ಹಾಕಿದರು.

ಗುರುವಂದನೆ ಹಾಗೂ ಸಹಪಾಠಿಗಳ ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಜತೆಯಾಗಿ ಕಲಿತವರು, ತಮಗೆ ಪಾಠ ಹೇಳಿ ಭವಿಷ್ಯ ರೂಪಿಸಿಕೊಟ್ಟ ಗುರುಗಳನ್ನು ಸ್ಮರಿಸಲಾಯಿತು. ಗುರುಗಳಿಗೆ ಆರತಿ ಬೆಳಗಿ ವೇದಿಕೆಗೆ ಕರೆತಂದರು. ಶಾಲು, ಹಾರ, ತುರಾಯಿ, ನೆನಪಿನ ಕಾಣಿಕೆ ನೀಡಿ ಆಶೀರ್ವಾದ ಪಡೆದರು.

ಗುರುಗಳಾದ ಎಸ್.ಕೆ.ದೇವರಾಜು, ಎಸ್.ಆರ್.ರಾಮಕೃಷ್ಣ, ಎಸ್.ಲಕ್ಕೇಗೌಡ, ಕೆ.ಎಸ್.ಪರಮೇಶ್ವರಯ್ಯ, ಎಸ್.ಶಂಕರಾಚಾರ್ಯ, ಮದರ್‌ಸಾಬ್, ಮೈಮುನಿಸ್ಸಾ, ಡಿ.ಲಿಂಗರಾಜು, ಸಿ.ಎಂ.ಸುಮಾ, ಎಚ್.ಬಿ.ಎನ್.ಪರಮೇಶ್ವರ್, ಆರ್.ಸುಧೀರ್, ಕಿರಣ್, ಪುರುಷೋತ್ತಮ್ ಶಿಷ್ಯರಿಂದ ಗೌರವ ಸ್ವೀಕರಿಸಿ ಮಾತನಾಡಿದರು. ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ತಾಲೂಕು ಸಹಶಿಕ್ಷಕ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು ಮತ್ತಿತರರಿದ್ದರು.