ಧಾರವಾಡ: ಹುಬ್ಬಳ್ಳಿ ತಾಲೂಕಿನ ಮಂಟೂರ ಶ್ರೀ ಅಡವಿ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಶಿವಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಿಗೆ ಆದ ಅನ್ಯಾಯ ಸರಿಪಡಿಸುವುದು ಮತ್ತು ಸಹಾಯಧನ ಪಡೆಯಲು ಖೆೊಟ್ಟಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನೊಂದ ಶಿಕ್ಷಕರು ಹಾಗೂ ಸಿಪಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.
ಶಿಕ್ಷಕ ಕ್ಕೀರಗೌಡ ಅಮಾತಿಗೌಡರ ಹಾಗೂ ಸಿಪಾಯಿ ಮುದಕಪ್ಪ ಗಾಜಿ ಧರಣಿ ನಡೆಸಿದರು.
ಸಂಸ್ಥೆಯ 4 ಸಿಬ್ಬಂದಿಯನ್ನು ಗೈರುಹಾಜರಿ ತೋರಿಸಿ 2018ರ ಜೂ. 1ರಂದು ಸೇವೆಯಿಂದ ವಜಾಗೊಳಿಸಲಾಗಿದೆ. ಈ ದಿನಾಂಕದ ನಂತರವೂ ಸೇವೆ ಸಲ್ಲಿಸಿದ ದಾಖಲೆಗಳಿವೆ. ಸಂಸ್ಥೆಯವರು ಖೆೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರದ ಸಹಾಯಧನ ಪಡೆದಿದ್ದಾರೆ. ಶಿಕ್ಷಕರ ನೇಮಕಾತಿಯಲ್ಲಿ ಖೆೊಟ್ಟಿ ದಾಖಲೆ ಸೃಷ್ಟಿಸಿದ್ದು, ಈ ಬಗ್ಗೆ ಶಿಕ್ಷಣ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ನ್ಯಾಯ ಒದಗಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ ಎಂದು ಅಮಾತಿಗೌಡರ ಅವರು ಅಪರ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮನವಿ ಸ್ವೀಕರಿಸಿದ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ, ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.