ಜಮಖಂಡಿಯಲ್ಲಿ ನಡೆದ ಕಾವ್ಯಕೋಟೆಯ ಮಿನುಗು ನಕ್ಷತ್ರಗಳು ಪ್ರಶಸ್ತಿ ಪ್ರದಾನ ಮತ್ತು ಸತ್ಕಾರ ಸಮಾರಂಭವನ್ನು ಶಿವಾನಂದ ಶೆಲ್ಲಿಕೇರಿ ಉದ್ಘಾಟಿಸಿದರು. ಡಾ.ಲಿಂಗಾನಂದ ಗವಿಮಠ, ಸಂತೋಷ ತಳಕೇರಿ, ಡಾ. ಸಂಗಮೇಶ ಮಟೋಳಿ, ಗುರುರಾಜ ಲೂತಿ, ಬಾಹುಬಲಿ ಬಿರಾದಾರಪಾಟೀಲ ಇತರರಿದ್ದರು. 
ಜಿಲ್ಲೆ

ಶಿಕ್ಷಕ ಕವಿಗಳು ಕೆನೆಪದರ ಶಿಕ್ಷಕರು

ಜಮಖಂಡಿ: ವರ್ಗದ ಕೊಠಡಿ ಜತೆಗೆ ಸಾಮಾಜಿಕ ಬಂಧುತ್ವ ಮತ್ತು ಪರಿಸರ ಪ್ರೀತಿಸುವ ಶಿಕ್ಷಕರಿಂದ ಮಾತ್ರ ಕಾವ್ಯದ ಭಾಷೆ ಹುಟ್ಟಲು ಸಾಧ್ಯ ಎಂದು ಕಸಾಪ ಬೀಳಗಿ ತಾಲೂಕು ಘಟಕದ ಅಧ್ಯಕ್ಷ ಗುರುರಾಜ ಲೂತಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳು, ಶ್ರೀ ವೀರೇಶ್ವರ ಪ್ರಕಾಶನ ಹಾಗೂ ಸಾಹಿತ್ಯ ಸೌರಭ ವೇದಿಕೆ ಆಶ್ರಯದಲ್ಲಿ ಇಲ್ಲಿನ ಕೋರ್ಟ್ ರಸ್ತೆಯ ಹೊಸಟ್ಟಿ ಕಟ್ಟಡದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕ ಸಾಹಿತಿಗಳ ಸಮ್ಮೇಳನದ ಅಂಗವಾಗಿ ಹೊರತಂದ ಕವನ ಸಂಕಲನ ‘ಕಾವ್ಯಕೋಟೆ’ಯಲ್ಲಿ ಅತ್ಯುತ್ತಮ ಕವನ ರಚಿಸಿದ ಕವಿಗಳಿಗೆ ‘ಕಾವ್ಯಕೋಟೆಯ ಮಿನುಗು ನಕ್ಷತ್ರಗಳು’ ಪ್ರಶಸ್ತಿ ಪ್ರದಾನ ಮತ್ತು ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಬದುಕನ್ನು ಪ್ರೀತಿಸುವವರಿಗೆ ಮಾತ್ರ ಕಾವ್ಯ ಕಟ್ಟುವ ಕಲೆ ಕರಗತ ಆಗುತ್ತದೆ. ಅನುಭವ ಮತ್ತು ಅನುಭಾವದ ಮೂಲಕ ಸುತ್ತಮುತ್ತಲಿನ ಪರಿಸರದ ಭಾಷೆಯಲ್ಲಿ ಕಾವ್ಯಗಳು ಹೊರಬರಬೇಕು. ಬದುಕಿನ ಶೋಧನೆಯ ಕಡೆಗೆ ಕಾವ್ಯಗಳು ಸಾಗಬೇಕು. ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಾವ್ಯಗಳು ಬರಬೇಕು ಎಂದರು.

ನಿವೃತ್ತ ಪ್ರಾಚಾರ್ಯ, ಕಾರ್ಯಕ್ರಮ ಪ್ರಾಯೋಜಕ ಡಾ. ಸಂಗಮೇಶ ಮಟೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೋಕದ ವೈಚಿತ್ರೃಗಳನ್ನು ತೆರೆದ ಕಣ್ಣಗಳಿಂದ ನೋಡುವ ಮನಸ್ಸು ಹಾಗೂ ಕೌಶಲ ಇರುವವವರಲ್ಲಿ ಮಾತ್ರ ಪ್ರತಿಭೆ ಅರಳುತ್ತದೆ ಎಂದರು.

ಸರ್ಕಾರಿ ಪಿ.ಬಿ.ಪ.ಪೂ. ಕಾಲೇಜಿನ ಉಪನ್ಯಾಸಕ ಡಾ. ಲಿಂಗಾನಂದ ಗವಿಮಠ ಮಾತನಾಡಿದರು.
ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸಮಾರಂಭ ಉದ್ಘಾಟಿಸಿದರು.

ಒಟ್ಟು 28 ಜನ ಶಿಕ್ಷಕ ಕವಿಗಳಿಗೆ ‘ಕಾವ್ಯಕೋಟೆಯ ಮಿನುಗು ನಕ್ಷತ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರ ಪರ ದಾಕ್ಷಾಯಿಣಿ ಮಂಡಿ (ಚಿಮ್ಮಡ), ಶೋಭಾ ಮೇಡೆಗಾರ(ಹೊನಗಣಹಳ್ಳಿ ಜಿ. ವಿಜಯಪುರ), ಸೋಮಲಿಂಗ ಬೇಡರ (ಮನ್ನಿಕೇರಿ), ಶಿವಪ್ರಕಾಶಸ್ವಾಮಿ ಸರಗಣಾಚಾರಿಮಠ (ಮುಧೋಳ), ನಾರಾಯಣ ಶಾಸಿ (ಕುಂಬಾರಹಳ್ಳ) ತಮ್ಮ ಅನಿಸಿಕೆ ಹಂಚಿಕೊಂಡರು.

ಮುಖ್ಯಶಿಕ್ಷಕ ಶಂಕರ ಲಮಾಣಿ ಪ್ರಾರ್ಥನೆ ಗೀತೆ ಹಾಡಿದರು. ಸಾಹಿತಿ ಬಾಹುಬಲಿ ಬಿರಾದಾರಪಾಟೀಲ ಸ್ವಾಗತಿಸಿದರು. ಕ.ಸಾ.ಪ.. ತಾಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಗುರುನಾಥ ಸುತಾರ ಅತಿಥಿಗಳನ್ನು ಪರಿಚಯಿಸಿದರು. ಭಾಗ್ಯಶ್ರೀ ಕೋಟಿ ನಿರೂಪಿಸಿದರು. ಬಸವರಾಜ ಗಿರಗಾಂವಿ ವಂದಿಸಿದರು.