ಜಿಲ್ಲೆ

ವರ್ಗಾವಣೆಯ ಆಘಾತಕ್ಕೆ ಶಿಕ್ಷಕಿ ಸಾವು

ಖಿನ್ನತೆಗೊಳಗಾಗಿದ್ದ ಟೀಚರ್​ : ಆರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದ್ದರೂ ವರ್ಗಾವಣೆ

ಕೆಜಿಎಫ್​: ಜೂ.20ರಂದು ಶಿಕ್ಷಣ ಇಲಾಖೆ ವತಿಯಿಂದ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ನಗರದ ತಮಿಳು ಶಿಕ್ಷಕಿಯೊಬ್ಬರನ್ನು ಶ್ರೀನಿವಾಸಪುರ ತಾಲೂಕಿಗೆ ವರ್ಗಾವಣೆಗೊಳಿಸಿದ ವಿಚಾರ ತಿಳಿಯುತ್ತಿದ್ದಂತೆ ತೀವ್ರ ಖಿನ್ನತೆಗೆ ಒಳಗಾದ ಶಿಕ್ಷಕಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ನಿರ್ಮಲಾ ಕುಮಾರಿ(54) ಮೃತ ಶಿಕ್ಷಕಿ. ನಗರದ ಎನ್​.ಟಿ. ಬ್ಲಾಕ್​ನ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ ಎರಡು ವಾರಗಳ ಹಿಂದೆ ಬಿಇಒ ಕಚೇರಿಯಿಂದ ದೂರವಾಣಿ ಕರೆ ಮಾಡಿ ನಿಮಗೆ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿಗೆ ವರ್ಗಾವಣೆಯಾಗಿದ್ದು, ಕೂಡಲೇ ವರದಿ ಮಾಡಿಕೊಳ್ಳುವಂತೆ ಸೂಚಿಸಿದ ಬಳಿಕ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಕೆಜಿಎಫ್​ನ ಎಲ್ಲ ತಮಿಳು ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿದ್ದ ತಮಿಳು ಶಿಕ್ಷಕರನ್ನು ಕೌನ್ಸೆಲಿಂಗ್​ ಮುಖಾಂತರ ಜಿಲ್ಲೆಯಲ್ಲಿ ಖಾಲಿ ಇರುವ ಇತರ ಸ್ಥಳಗಳಿಗೆ ವರ್ಗಾವಣೆಗೊಳಿಸಲಾಗಿತ್ತು. ಅದರಂತೆ ನಿರ್ಮಲಾ ಕುಮಾರಿ ಅವರನ್ನು ಸೋಮಯಾಜಲಹಳ್ಳಿಯ ಕರ್ನಾಟಕ ಪಬ್ಲಿಕ್​ ಶಾಲೆಗೆ ವರ್ಗಾವಣೆಗೊಳಿಸಿದ್ದರು.
ಜೂ.20ರಂದು ಪ್ರಾರಂಭವಾದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್​ನಲ್ಲಿ ಕೆಲವು ಶಿಕ್ಷಕರಿಗೆ ಅವರು ಬೋಧಿಸುವ ವಿಷಯ ಲಭ್ಯವಿಲ್ಲದ ಕಾರಣ ಬೇರೆ ಭಾಷೆ ಬೋಧಿಸುವಂತೆ ತಿಳಿಸಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಅಲ್ಪಸಂಖ್ಯಾತ ಭಾಷೆ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಪಿಟಿಆರ್​(ಪ್ಯುಪಿಲ್​ ಟೀಚರ್​ ರೇಷಿಯೋ) ಅನ್ವಯವಾಗದೇ ಇದ್ದರೂ ವರ್ಗಾವಣೆಗೊಳಿಸಿದ್ದರು ಎನ್ನಲಾಗಿದೆ. ಸರ್ಕಾರದ ಭಾಷಾ ನೀತಿಯ ಪ್ರಕಾರ ಅಲ್ಪಸಂಖ್ಯಾತ ಭಾಷೆಗಳನ್ನು ವ್ಯಾಸಂಗ ಮಾಡಲು ಕೇವಲ ಒಂದು ವಿದ್ಯಾರ್ಥಿ ಶಾಲೆಗೆ ಸೇರಿದರೂ ಅವರಿಗೆ ಅವರ ಮಾತೃಭಾಷೆಯಲ್ಲಿ ಬೋಧನಾ ಕಾರ್ಯವನ್ನು ಮಾಡಬೇಕಾಗಿದೆ. ಅಲ್ಲದೇ ಈ ರೀತಿ ಬೋಸುವ ಶಿಕ್ಷಕರು ಐಚ್ಚಿಕ ವಿಷಯವನ್ನಾಗಿ ಆ ಭಾಷೆಯನ್ನು ವ್ಯಾಸಂಗ ಮಾಡಿರಬೇಕಾದುದು ಕಡ್ಡಾಯವಾಗಿರುತ್ತದೆ.
ಇಡೀ ಜಿಲ್ಲೆಯಲ್ಲಿ ಕೆಜಿಎಫ್​ ತಾಲೂಕು ಕೇಂದ್ರ ಸ್ಥಾನವನ್ನು ಹೊರತುಪಡಿಸಿ ಇತರ ಯಾವುದೇ ತಾಲೂಕು ಕೇಂದ್ರಸ್ಥಾನಗಳಲ್ಲಾಗಲಿ
ಅಥವಾ ಆ ತಾಲೂಕುಗಳ ಯಾವುದೇ ಶಾಲೆಯಲ್ಲಾಗಲಿ ತಮಿಳು ಬೋಧಿಸುವುದಿಲ್ಲ.
ಕೇವಲ ಕೆಜಿಎಫ್​ನಲ್ಲಿ ಮಾತ್ರ ಬೋಧಿಸಲಾಗುತ್ತದೆ. ಕೆಜಿಎಫ್​ ಶಾಲೆಗಳಲ್ಲಿನ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿದಲ್ಲಿ ಇಲ್ಲಿ ತಮಿಳು ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಓದುತ್ತಿರುವ ಮಕ್ಕಳ ಗತಿಯೇನು ಎಂದು ವಿದ್ಯಾರ್ಥಿಗಳ ಪಾಲಕರು ಪ್ರಶ್ನಿಸುತ್ತಿದ್ದು, ತಮಿಳು ಶಿಕ್ಷಕರ ವರ್ಗಾವಣೆ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

ಕಿಡ್ನಿ ಕಸಿ ಮಾಡಲಾಗಿತ್ತು:ಶಿಕ್ಷಕಿ ನಿರ್ಮಲಾ ಕುಮಾರಿ ಎರಡು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. 3 ತಿಂಗಳ ಹಿಂದೆ ಮೈಸೂರಿನ ಜೆಎಸ್​ಎಸ್​ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಕಳೆದ ಜೂನ್​ 20ರಂದು ವರ್ಗಾವಣೆ ಸಂದರ್ಭದಲ್ಲಿ ಆರೋಗ್ಯದ ಸಮಸ್ಯೆ ಕುರಿತು ಆಸ್ಪತ್ರೆ ದಾಖಲೆಗಳನ್ನು ನೀಡಿ ವರ್ಗಾವಣೆ ಬೇಡವೆಂದು ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರೂ, ಅಧಿಕಾರಿಗಳು ಸಮಸ್ಯೆ ಪರಿಗಣಿಸದೆ ವರ್ಗಾವಣೆಗೊಳಿಸಿದ್ದರು. ಮೊದಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶಿಕ್ಷಕಿಗೆ ವರ್ಗಾವಣೆ ವಿಚಾರ ತಿಳಿದಿರಲಿಲ್ಲ. ಆದರೆ ಎರಡು ವಾರಗಳ ಹಿಂದೆ ವಿಷಯ ತಿಳಿದಿದ್ದು, ಪ್ರತಿದಿನ ಕೆಜಿಎಫ್​ನಿಂದ ಹೋಗಿಬರಲು ಸುಮಾರು 140 ಕಿಮೀ ದೂರ ಕ್ರಮಿಸಬೇಕು ಎಂಬ ಆಲೋಚನೆಯಿಂದ ಖಿನ್ನತೆಗೆ ಒಳಗಾಗಿದ್ದರು. ಶನಿವಾರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದರಿಂದ ಆಸ್ಪತ್ರೆಗೆ ಸೇರಿಸಲು ಮುಂದಾದಾಗ ಮಾರ್ಗಮಧ್ಯೆ ಅಸುನೀಗಿದ್ದಾರೆ ಎಂದು ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ.