ಪಿರಿಯಾಪಟ್ಟಣದ ಕೆ.ಆರ್.ಫಂಕ್ಷನ್ ಹಾಲ್ ನಲ್ಲಿ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ 6 ಶಿಕ್ಷಕರಿಗೆ ರೋಟರಿ ನೇಷನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ.ಬಿ.ಸಂಪತ್, ಕೆ.ರಮೇಶ್, ಬಿ.ಎಸ್.ಸತೀಶ ಆರಾಧ್ಯ, ಎಸ್.ರಮೇಶ್, ಜೆ.ಎಸ್.ನಾಗರಾಜ್ ಇತರರು ಇದ್ದರು. 
ಜಿಲ್ಲೆ

ಶಿಕ್ಷಣ ರಾಷ್ಟ್ರೀಕರಣವಾದರೆ ಜನಸಾಮಾನ್ಯನಿಗೆ ಅನುಕೂಲ

ನಾಗೇಶ ಎಸ್

ಪಿರಿಯಾಪಟ್ಟಣ: ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸದೃಢವಾಗಬೇಕಿದ್ದಲ್ಲಿ ಶಿಕ್ಷಣ ರಾಷ್ಟ್ರೀಕರಣವಾಗಬೇಕು ಎಂದು ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಹಾಗೂ ವಕೀಲ ಜೆ.ಎಸ್.ನಾಗರಾಜ್ ಅಭಿಪ್ರಾಯಪಟ್ಟರು.

ಪಟ್ಟಣದ ಕೆ.ಆರ್.ಫಂಕ್ಷನ್ ಹಾಲ್‌ನಲ್ಲಿ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ 6 ಮಂದಿ ಶಿಕ್ಷಕರಿಗೆ ರೋಟರಿ ನೇಷನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿ ವಿತರಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಅತ್ಯಂತ ದುಬಾರಿಯಾಗುತ್ತಿದ್ದು, ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣ ಪಡೆಯಲು ದುಬಾರಿ ವೆಚ್ಚ ಭರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಶಿಕ್ಷಣವೆಂಬುದು ವ್ಯಾಪಾರೀಕರಣವಾಗುತ್ತಿದ್ದು, ಎಲ್‌ಕೆಜಿಗೆ ಮಕ್ಕಳನ್ನು ದಾಖಲಿಸಲು ಲಕ್ಷಾಂತರ ರೂ. ಹಣ ವೆಚ್ಚ ಮಾಡಬೇಕಾದ ಪರಿಸ್ಥಿತಿ ಇದೆ. ಶಿಕ್ಷಣ ವ್ಯವಸ್ಥೆ ರಾಷ್ಟ್ರೀಕರಣವಾದಲ್ಲಿ ಜನಸಾಮಾನ್ಯರು ಸಹ ತಮಗೆ ಬೇಕಾದ ಶಿಕ್ಷಣವನ್ನು ಉಚಿತವಾಗಿ ಅಥವಾ ಕನಿಷ್ಠ ವೆಚ್ಚದಲ್ಲಿ ಪಡೆಯಬಹುದಾಗಿದೆ ಎಂದರು.

ರೋಟರಿ ವಲಯ ಸೇನಾನಿ ಕೆ.ರಮೇಶ್ ಮಾತನಾಡಿ, ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಪವಿತ್ರವಾಗಿದ್ದು, ಮಕ್ಕಳಿಗೆ ಪಾಠ ಪ್ರವಚನ ಬೋಧಿಸುವುದರ ಜತೆಗೆ ಶಿಸ್ತು ಮತ್ತು ಸಂಸ್ಕೃತಿಯನ್ನು ಕಲಿಸಲು ಸಹಕಾರಿಯಾಗಿದೆ. ಯಾವುದೇ ಜಾತಿ, ಧರ್ಮದ ಭೇದ ಭಾವವಿಲ್ಲದೆ ಎಲ್ಲರೂ ಸರಿಸಮಾನರಾಗಿ ಕಲಿಯುವ ವ್ಯವಸ್ಥೆ ಸಾರ್ವಜನಿಕ ಶಿಕ್ಷಣ ನೀತಿಯಿಂದ ದೊರಕಲಿದೆ. ಶಿಕ್ಷಕರು ಯಾವುದೇ ಸ್ವಾರ್ಥ ಮನೋಭಾವವಿಲ್ಲದೆ ಪಾಠ ಪ್ರವಚನಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಮತ್ತಷ್ಟು ಸುಧಾರಿಸಲಿದೆ ಎಂದರು.

ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಅಧ್ಯಕ್ಷ ಎಂ.ಬಿ.ಸಂಪತ್, ಕಾರ್ಯದರ್ಶಿ ಬಿ.ಎಸ್.ಸತೀಶ ಆರಾಧ್ಯ, ನಿಯೋಜಿತ ಖಜಾಂಚಿ ಎಸ್.ರಮೇಶ್ ಮಾತನಾಡಿದರು. ಚಿಕ್ಕಮಾಗಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಎಚ್.ಪಿ. ಮುತ್ತುರಾಜ್, ಬಸಲಾಪುರ ಸರ್ಕಾರಿ ಶಾಲೆ ಶಿಕ್ಷಕಿ ಜಿ.ಎನ್.ಗಾಯತ್ರಿ ಆರಾಧ್ಯ, ಮುದ್ದನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ವಿ.ಎಸ್.ನಟೇಶ್, ಭುವನಹಳ್ಳಿ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸಿ.ಎಂ.ಗೀತಾ, ಹುಣಸವಾಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಕೆ.ವಿ.ಶಿಲ್ಪಾ ಮತ್ತು ಹಿಟ್ನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಬಿ.ಎಸ್.ಜಯಸ್ವಾಮಿ ಅವರಿಗೆ ರೋಟರಿ ನೇಷನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಪದಾಧಿಕಾರಿಗಳಾದ ಸಿ.ಎನ್.ವಿಜಯ್, ಬಿ.ಆರ್.ಗಣೇಶ್, ಡಿ.ಆರ್.ಧನಂಜಯ್, ಡಿ.ರಮೇಶ್, ಬಿ.ಎಸ್.ಪ್ರಸನ್ನ ಕುಮಾರ್, ಬಸವರಾಜ್, ದಿಲೀಪ್, ಬಿ.ವಿ.ಅನಿತಾ, ಸ್ಮಿತಾ, ಪರಮೇಶ್ ಇದ್ದರು.