ಜಿಲ್ಲೆ

ಮದ್ಯಪಾನ ಮಾಡಿಕೊಂಡೇ ಶಾಲೆಗೆ ಬರುತ್ತಿದ್ದ ಶಿಕ್ಷಕಿ; ಬಾಟಲಿ ಸಮೇತ ಸಿಕ್ಕಿಬಿದ್ದು ಅಮಾನತು..

Webdesk - Ravikanth

ತುಮಕೂರು: ಶಿಕ್ಷಕಿಯೊಬ್ಬರು ಶಾಲೆಗೆ ಮದ್ಯಪಾನ ಮಾಡಿಕೊಂಡು ಬರುತ್ತಿದ್ದುದಲ್ಲದೆ, ಮದ್ಯದ ಅಮಲಿನಲ್ಲಿ ವಿದ್ಯಾರ್ಥಿಗಳಿಗೆ ಹೊಡೆಯುವುದು ಹಾಗೂ ಇತರ ಶಿಕ್ಷಕರಿಗೆ ತೊಂದರೆ ಕೊಡುತ್ತಿರುವುದು ಕೂಡ ನಡೆಯುತ್ತಿದೆ. ಕೊನೆಗೂ ಆಕೆ ಮದ್ಯದ ಬಾಟಲಿ ಸಹಿತ ಸಿಕ್ಕಿಹಾಕಿಕೊಂಡಿದ್ದು, ಅಮಾನತುಗೊಳಿಸಲಾಗಿದೆ.

ತುಮಕೂರು ತಾಲೂಕಿನ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಪ್ರಕರಣ ನಡೆದಿದ್ದು, ಇಲ್ಲಿನ ಶಿಕ್ಷಕಿ ಗಂಗಲಕ್ಷಮ್ಮ ಎಂಬಾಕೆ ನಿತ್ಯವೂ ಮದ್ಯಪಾನ ಮಾಡಿಕೊಂಡು ಬರುತ್ತಿದ್ದಳು ಎನ್ನಲಾಗಿದೆ. ಅಲ್ಲದೆ ಮದ್ಯದ ಮತ್ತಿನಲ್ಲಿ ವಿದ್ಯಾರ್ಥಿಗಳಿಗೆ ಹೊಡೆಯುವುದು, ಇತರ ಶಿಕ್ಷಕರಿಗೆ ತೊಂದರೆ ಕೊಡುವುದು ಮಾಡುತ್ತಿದ್ದಳೆಂಬ ಆರೋಪವೂ ಇದೆ.

ಕಳೆದ 25 ವರ್ಷಗಳಿಂದ ಈ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಬಿಇಒ ಹನುಮನಾಯ್ಕ್ ಶಾಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗಂಗಲಕ್ಷ್ಮಮ್ಮಳ ಕೊಠಡಿಯಲ್ಲಿ ಮದ್ಯದ ಒಂದು ಫುಲ್ ಬಾಟಲ್ ಮತ್ತು ಎರಡು ಖಾಲಿ ಬಾಟಲಿಗಳು ಸಿಕ್ಕಿವೆ. ಮೊದಲು ಡ್ರಾಯರ್ ಓಪನ್ ಮಾಡಲು ಆಕೆ ಅಡ್ಡಿಪಡಿಸಿದ್ದಳು. ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಡ್ರಾಯರ್ ಬೀಗ ಒಡೆದು ತೆಗೆದಾಗ ಮದ್ಯದ ಬಾಟಲಿ ಸಿಕ್ಕಿದೆ. ಮಧ್ಯದ ಬಾಟಲಿ ಪತ್ತೆಯಾಗುತಿದ್ದಂತೆ ಆತ್ಮಹತ್ಯೆಯ ಡ್ರಾಮಾ ಮಾಡಿದ ಶಿಕ್ಷಕಿ, ಶಾಲೆ ಕೊಠಡಿಯ ಬಾಗಿಲು ಹಾಕಿಕೊಂಡು ಬೆದರಿಕೆಯೊಡ್ಡಿದ್ದಳು. ಬಳಿಕ ಶಿಕ್ಷಣ ಇಲಾಖೆ ಚಿಕ್ಕಸಾರಂಗಿಯ ಇಬ್ಬರು ಶಿಕ್ಷಕಿಯರನ್ನು ಅಮಾನತುಗೊಳಿಸಿದೆ.