ಮಡಿಕೇರಿ:
ಪ್ರಾಥಮಿಕ ಶಾಲಾ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಸಂಬAಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕಡತಕ್ಕೆ ತಕ್ಷಣ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚೇತನ್, ಈ ತಿಂಗಳ 25ರ ಒಳಗೆ ನ್ಯಾಯ ಸಿಗದಿದ್ದರೆ ಸೆ.3ರಂದು ಶಾಲೆಗಳನ್ನು ಬಂದ್ ಮಾಡಿ ಬೆಂಗಳೂರು ಫ್ರೀಡಂ ಪಾರ್ಕ್ ಚಲೋ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ವಿಷಯಕ್ಕೆ ಸಂಬAಧಿಸಿದAತೆ ಕಳೆದ ವರ್ಷ ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಗಿತ್ತು. ನಂತರ ನ್ಯಾಯ ದೊರಕಿಸುವ ಬಗ್ಗೆ ಶಿಕ್ಷಣ ಸಚಿವರ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ತೆಗೆದುಕೊಳ್ಳಲಾಗಿತ್ತು. ಕಳೆದ ವರ್ಷದ ಸೆ. 4ರಂದು ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿ 30 ದಿನಗಳ ಒಳಗೆ ಅಧ್ಯಯನ ವರದಿ ತರಿಸಿಕೊಂಡು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯ ಸರಿಪಡಿಸುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ ಆ ಭರವಸೆ ಇಲ್ಲಿಯ ತನಕ ಈಡೇರಿಲ್ಲ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ವಿಷಯದಲ್ಲಿ ಕಾನೂನು ಇಲಾಖೆ 2 ಸಲ ತನ್ನ ಸ್ಪಷ್ಟ ಅಭಿಪ್ರಾಯ ನೀಡಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೂ ತನ್ನ ಅಭಿಪ್ರಾಯ ಕೊಟ್ಟಿದೆ. ಆರ್ಥಿಕ ಇಲಾಖೆಯಿಂದ ಅಭಿಪ್ರಾಯ ಬರಲು ಬಾಕಿ ಇದೆ. ತಕ್ಷಣ ಈ ಎಲ್ಲಾ ಇಲಾಖೆಗಳಿಂದ ಅಭಿಪ್ರಾಯ ಕ್ರೋಢೀಕರಿಸಿ ಸಚಿವ ಸಂಪುಟ ಅನುಮೋದನೆ ಪಡೆದುಕೊಂಡು ಆ. 25ರ ಒಳಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಸೆ. 3ಕ್ಕೆ ಶಾಲೆಗಳನ್ನು ಬಂದ್ ಮಾಡಿ ಫ್ರೀಡಂ ಪಾರ್ಕ್ ಚಲೋ ನಡೆಸಲಾಗುವುದು. 6ರಿಂದ 8ನೇ ತರಗತಿಗಳ ತನಕ ಬೋಧನೆ ಬಹಿಷ್ಕಾರ ಮಾಡಿ 1ರಿಂದ 5ನೇ ತರಗತಿ ತನಕ ಮಾತ್ರ ಬೋಧನೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗುವುದು.
ಸೆ.3ರಂದು ಸರ್ಕಾರದಿಂದ ಯಾವುದೇ ಸ್ಪಷ್ಟ ನಿರ್ಣಯ ಬಾರದಿದ್ದಲ್ಲಿ ಸೆ.4ರಿಂದ 5ರ ತನಕ ಅಹೋರಾತ್ರಿ ಧರಣಿ ನಡೆಸಲಾಗುವುದು. ಸೆ. 5ರಂದು ಜಿಲ್ಲಾ ಮಟ್ಟದಲ್ಲಿನ ನಡೆಯುವ ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ಫ್ರೀಡಂ ಪಾರ್ಕ್ನಲ್ಲೇ ಶಿಕ್ಷಕರ ದಿನ ಆಚರಿಸಲಾಗುವುದು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ಎನ್. ಮಂಜುನಾಥ ಮಾತನಾಡಿ ಶಿಕ್ಷಣ ಇಲಾಖೆಯಲ್ಲಿ ಡಿ ದರ್ಜೆ ನೌಕರನಾಗಿ ಸೇರಿದವನು ಸೂಪರಿಟೆಂಡೆAಟ್ ತನಕ ತಲುಪುವ ಅವಕಾಶ ಇದೆ. ಆದರೆ ಶಿಕ್ಷಕರಿಗೆ ಬಡ್ತಿಯೇ ಇಲ್ಲ. ಶೂನ್ಯ ದಾಖಲಾತಿಗೆ ಶಿಕ್ಷಕರನ್ನು ಹೊಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಪ್ರಸನ್ನಕುಮಾರ್ ಮಾತನಾಡಿ ಶಿಕ್ಷಕರನ್ನು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿಸಲಾಗುತ್ತಿದೆ. ಶಿಕ್ಷಕರು ಪ್ರತಿದಿನ 4 ಆ್ಯಪ್‌ಗಳನ್ನು ಅಪ್‌ಡೆಟ್ ಮಾಡುವ ಸ್ಥಿತಿ ಇದೆ. ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿರಾಜಪೇಟೆ ತಾಲೂಕು ಅಧ್ಯಕ್ಷ ಇ. ಸುರೇಂದ್ರ ಮಾತನಾಡಿ, ನಾವು ದುಡ್ಡು ಕೇಳಿಲ್ಲ, ಇಂಕ್ರಿಮೆAಟ್ ಕೇಳಿಲ್ಲ. ಸ್ವಾಭಿಮಾನ ಕೇಳಿದ್ದೆವು ಸರ್ಕಾರ ಇದನ್ನು ಈಡೇರಿಸಬೇಕು. ಶಿಕ್ಷಕರಿಂದ ಬೋಧನೆ ಬಿಟ್ಟು ಉಳಿದ ಎಲ್ಲಾ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಶಿಕ್ಷಕರಿಗೆ ವಹಿಸಿರುವ ಉಳಿದ ಕೆಲಸಗಳ ಹೊರೆ ಕಡಿಮೆ ಮಾಡಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಟಿ.ಕೆ. ಬಸವರಾಜ್ ಸುದ್ದಿಗೋಷ್ಠಿಯಲ್ಲಿ ಇದ್ದರು.