ಸೋಮವಾರಪೇಟೆ: ಕೊಡವ ಸಂಸ್ಕೃತಿಯ ಆಚಾರ-ವಿಚಾರಗಳನ್ನು ನಾವು ಪಾಲಿಸಿಕೊಂಡು, ಅದನ್ನು ನಮ್ಮ ಯುವ ಜನಾಂಗಕ್ಕೂ ಕಲಿಸಬೇಕು ಎಂದು ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಹೇಳಿದರು.
ಕೊಡವ ಸಮಾಜ ಸಭಾಂಗಣದಲ್ಲಿ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಕೈಲ್ ಮುಹೂರ್ತ ಸಂತೋಷಕೂಟತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಡವ ಸಂಸ್ಕೃತಿಯ ಪ್ರತೀಕವಾಗಿರುವ ಹಬ್ಬಗಳ ಆಚರಣೆ ಮೂಲಕ ಸಮುದಾಯ ಒಂದಾಗಿರಬೇಕು. ಕೊಡವ ಸಮಾಜಕ್ಕೆ ಒಳಪಟ್ಟಿರುವ ಚೌಡ್ಲು ಗ್ರಾಮದಲ್ಲಿರುವ ಜಾಗದಲ್ಲಿ ಮುಂದಿನ ದಿನಗಳಲ್ಲಿ ಭವನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಇದಕ್ಕೆ ಸಮುದಾಯದವರು ಸಹಕಾರ ನೀಡಬೇಕು. ಡಿ.24 ಹಾಗೂ 25ರಂದು ಸಮಾಜದ ಸಭಾಂಗಣದಲ್ಲಿ ಅದ್ದೂರಿಯಾಗಿ ಸುವರ್ಣ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸುವರ್ಣ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಫರ್ಧೆಗಳು ನಡೆಯಲಿವೆ. ವಿವಿಧ ಕ್ಷೇತ್ರಗಳ ಸಾಧಕರು, ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕೊಡವ ಪಾಲಕಕರಿಗೆ ಸನ್ಮಾನ, ಇದುವರೆಗೂ ಸಮಾಜ ಬೆಳೆದು ಬಂದ ರೀತಿ, ಸಾಧನೆ ಹಾಗೂ ಬರಹಗಾರರ ಕಥೆ, ಕವನ, ಲೇಖನಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಟ್ಟಚೆರವಂಡ ಕೆ.ನಾಚಪ್ಪ ಮಾತನಾಡಿ, ಕೊಡವ ಸಮುದಾಯದ ಯುವ ಜನಾಂಗ ವಿದ್ಯಾಭ್ಯಾಸಕ್ಕೆ ಹೆಚ್ಚು ಆಸಕ್ತಿ ತೋರಬೇಕು. ಕೇವಲ ಕಂಪನಿ ಉದ್ಯೋಗಕ್ಕೆ ಸೀಮಿತವಾಗದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ತೋರಬೇಕೆಂದರು.
ಭಾರತೀಯ ಸೈನ್ಯದಲ್ಲಿ ಕೊಡವ ಸೈನಿಕರಿಗೆ ವಿಶೇಷ ಗೌರವವಿದೆ. ವೀರ ಪರಂಪರೆ ಹೊಂದಿರುವ ಕೊಡವ ಸಂಸ್ಕೃತಿ ಉಳಿಯಬೇಕು. ನಮ್ಮ ಪೂರ್ವಿಕರು ನಮಗೆ ಉಳಿಸಿಕೊಟ್ಟಿರುವ ಜಾಗವನ್ನು ಯಾವುದೇ ಸಂದರ್ಭದಲ್ಲೂ ಹೊರಗಿನವರಿಗೆ ಮಾರಾಟ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಸಮಾಜದ ಉಪಾಧ್ಯಕ್ಷ ಬೊಳಂದಂಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೆರ ಅನಿಲ್ ಇದ್ದರು. ಮಲ್ಲಾಜಿರ ಸುನು ಕಿಶೋರ್, ಹಂಚೆಟ್ಟಿರ ಸಾರಿಕ ತಮ್ಮಯ್ಯ, ಪೋರೆರ ಖುಷಿ, ಅಜ್ಜಮಕ್ಕಡ ಅಕ್ಷಿತಾ ಕಾರ್ಯಪ್ಪ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ನಂತರ ವಿವಿಧ ಸ್ಪರ್ಧೆಗಳು ಜರುಗಿದವು.