ಮಳವಳ್ಳಿ: ಶಿಕ್ಷಕರು ನಿರಂತರ ಅಧ್ಯಯನ ಮಾಡುವುದರ ಜತೆಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆಯಲ್ಲಿ ಆಸಕ್ತಿ ಮೂಡಿಸುವಂತೆ ಪಠ್ಯಕ್ರಮಗಳನ್ನು ಬೋಧನೆ ಮಾಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರವಿಕುಮಾರ್ ಹೇಳಿದರು.
ತಾಲೂಕಿನ ಧನಗೂರು ಕುರಿ ಫಾರ್ಮ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಹಾಡ್ಲಿ ಸಿಆರ್‌ಸಿ ವ್ಯಾಪ್ತಿಯ ಶಿಕ್ಷಕರ ಮಾಸಿಕ ಸಭೆ ಹಾಗೂ ನಲಿಕಲಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಲಾಖೆಯಿಂದ ನಡೆಸುವ ತರಬೇತಿಗಳು ಯಶಸ್ವಿಯಾಗಿ ಕಾರ್ಯಗತಗೊಳಿಸುವುದು ಎಲ್ಲ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನದತ್ತ ಹೆಚ್ಚಿನ ಒಲವು ಮೂಡಿಸುವ ನಿಟ್ಟಿನಲ್ಲಿ ಕಲಿಕೆಗೆ ಉತ್ತೇಜನ ನೀಡಬೇಕು. ಮಕ್ಕಳ ಕಲಿಕೆಗೆ ಪೂರಕವಾಗಿ ಚಟುವಟಿಕೆಗಳನ್ನು ಅಳವಡಿಸಿಕೊಂಡು ಉತ್ತಮವಾಗಿ ಪಠ್ಯಕ್ರಮಗಳನ್ನು ಬೋಧಿಸುವ ಮೂಲಕ ಮಕ್ಕಳ ಮನಸುಗಳನ್ನು ಸೆಳೆದುಕೊಳ್ಳುವಂತೆ ಸಲಹೆ ನೀಡಿದರು.
ಸಿಆರ್‌ಪಿ ಲೋಕೇಶ್ ಮಾತನಾಡಿದರು. ಶಿಕ್ಷಕರಾದ ಸೋಮಶೇಖರ್, ಸುಕನ್ಯಾ, ಹನುಮಂತಪ್ಪ, ವಿದ್ಯಾ, ಅಜೀಂ ಪ್ರೇಮ್ ಜಿ ಫೌಂಡೇಷನ್ ಹೇಮಂತ್ ಇತರರು ಇದ್ದರು.