ಅರಸೀಕೆರೆ ಗ್ರಾಮಾಂತರ: ಹೆತ್ತವರು, ಪಾಲಕರು ಬಾಲ್ಯದಲ್ಲಿಯೇ ತಮ್ಮ ಮಕ್ಕಳಿಗೆ ಉತ್ತಮ ನಡೆ, ನುಡಿ, ಸಂಸ್ಕಾರ, ಸಂಸ್ಕೃತಿ ಹಾಗೂ ದೇಶಾಭಿಮಾನ ಕಲಿಸುವ ಮೂಲಕ ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಕಣಕಟ್ಟೆ ಹೋಬಳಿ ಕ್ಯಾತನಹಳ್ಳಿ ಗ್ರಾಮದಲ್ಲಿ ಶರಣ, ಶರಣೆಯರ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆಧುನಿಕತೆ ಭರದಲ್ಲಿ ಆಚಾರ, ವಿಚಾರಗಳ ಪರಂಪರೆ ಕಣ್ಮರೆಯಾಗುತ್ತಿದ್ದು ಸಮಾಜ ಕವಲುದಾರಿಯಲ್ಲಿ ಸಾಗುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಸ್ತುತ ವಿದ್ಯಾವಂತ ಯುವಕರು ತಮ್ಮ ತಂದೆ, ತಾಯಿಯನ್ನು ಸಾಕಲಾರದೆ ಅನಾಥಾಶ್ರಮಕ್ಕೆ ದೂಡುವ ಮೂಲಕ ವಯಸ್ಸಿನ ಕಾಲದಲ್ಲಿ ಅನಾಥರನ್ನಾಗಿ ಮಾಡುತ್ತಿರುವುದು ತುಂಬಾ ದುಃಖಕರ ಸಂಗತಿಯಾಗಿದೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ತಂದೆ, ತಾಯಂದಿರು ತಮ್ಮ ಮಕ್ಕಳನ್ನು ಬಾಲ್ಯದಲ್ಲಿಯೇ ಬಸವಾದಿ ಶಿವಶರಣರ ಹಾಗೂ ಗುರು-ಹಿರಿಯರ ನಡೆ ನುಡಿಗಳನ್ನು ಕಲಿಸುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಿಸುವಂತೆ ಸ್ವಾಮೀಜಿ ತಿಳಿಸಿದರು.
ಪ್ರಕೃತಿಯ ಅಸಮತೋಲನ ಇಂದಿನ ಬರಗಾಲಕ್ಕೆ ಕಾರಣವಾಗಿದ್ದು, ರೈತರು ತಮ್ಮ ಹೊಲಗಳಲ್ಲಿ ಮರ, ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸುವ ಮೂಲಕ ಪರಿಸರ ರಕ್ಷಿಸಬೇಕಿದೆ, ಅಲ್ಲದೆ ಚೆಕ್‌ಡ್ಯಾಂ ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ಕಾಪಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಅಣ್ಣಾಯಕನಹಳ್ಳಿ ವಿಜಯಕುಮಾರ್, ಪ್ರಾಂಶುಪಾಲ ವಿರೂಪಾಕ್ಷಪ್ಪ, ನಾಗಸಮುದ್ರದ ಸ್ವಾಮಿ, ಕ್ಯಾತನಹಳ್ಳಿ ವಿನಯ್ ಮತ್ತಿತರರು ಉಪಸ್ಥಿತರಿದ್ದರು.