ತರೀಕೆರೆ: ಕೆಲವು ವರ್ಗಗಳಿಂದ ಮಾತ್ರ ಕರ್ನಾಟಕದಲ್ಲಿ ಕನ್ನಡ ಉಳಿದಿದೆ ಎಂದು ಸಾಹಿತಿ ಎಚ್.ಎಸ್.ಸುರೇಶ್ ಹೇಳಿದರು.
ಪಟ್ಟಣದ ಮಮತಾ ಮಹಿಳಾ ಸಮಾಜದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಪಾಲಕರು ಬಾಲ್ಯದಲ್ಲಿಯೇ ಭಾಷಾಭಿಮಾನ ಮೂಡಿಸಬೇಕು. ಕನ್ನಡ ಕಲಿತರೆ ಸಂಸ್ಕಾರ ತನ್ನಂತಾನಾಗಿಯೇ ಬರಲಿದೆ ಎಂದರು.
ಸಮಾಜ ಸೇವಕ ಟಿ.ಜಿ.ಮಂಜುನಾಥ್ ಮಾತನಾಡಿ, ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಎಂದೆಂದಿಗೂ ಅಳಿವಿಲ್ಲ. ಎಲ್ಲರೂ ಒಗ್ಗೂಡಿ ಶ್ರಮಿಸಿದರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನಿರ್ಗತಿಕರು ಹಾಗೂ ರೋಗಿಗಳ ಸೇವೆಯಲ್ಲಿ ಮಮತಾ ಮಹಿಳಾ ಸಮಾಜ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಉಳಿವು ಎಂಬ ಕಿರು ನಾಟಕ ಪ್ರದರ್ಶಿಸಲಾಯಿತು. ಮಮತಾ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ಲತಾ, ಸದಸ್ಯರಾದ ಕವಿತಾ, ಭಾಗ್ಯಾ ಮತ್ತಿತರರಿದ್ದರು.