ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ದಿನಗಳಲ್ಲಿ ಪಾಲಕರು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವುದು ಅಗತ್ಯವಾಗಿದೆ. ಮೌಲ್ಯಗಳನ್ನು ಕಲಿಯಲು ಇಂತಹ ಶಾಲೆಗಳು ಪಾಲಕರ ಆಯ್ಕೆಯಾಗಬೇಕು ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.
ಇಲ್ಲಿನ ಮುಮ್ಮಿಗಟ್ಟಿಯ ರಾಷ್ಟ್ರೊತ್ಥಾನ ವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಉತ್ಥಾನ ಭಾರತ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ರಾಷ್ಟ್ರೊತ್ಥಾನ ಶಾಲೆ ವಿಶಿಷ್ಟ ಯೋಜನೆಗಳನ್ನು ಹಾಕಿಕೊಂಡಿದೆ. ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಮನೆಯಲ್ಲಿ ಒಂದು ಚಿಕ್ಕದಾದ ಪುಸ್ತಕಗಳ ಸಂಗ್ರಹ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಕೇಂದ್ರದ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ಹಾಗೂ ರಾಷ್ಟ್ರ ಪರಿಷತ್ಗೆ 60 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಇದ್ದೇವೆ. ಸಂಘ ಹಾಗೂ ಪರಿಷತ್ ರಾಷ್ಟ್ರದ ಅಭಿವೃದ್ಧಿಗೆ ಅನೇಕ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿವೆ. ಈ ವರ್ಷ ಪಂಚ ಪರಿವರ್ತನೆ ಶೀರ್ಷಿಕೆಯಲ್ಲಿ ತನ್ನ ಕಾರ್ಯ ಯೋಜನೆಗಳನ್ನು ಮತ್ತಷ್ಟು ಉತ್ಸಾಹದಿಂದ ಮಾಡುತ್ತಿದೆ ಎಂದರು.
1ರಿಂದ 5ನೇ ತರಗತಿ ವಿಭಾಗದಲ್ಲಿ ಆರಾಧ್ಯ ಪೂಜಾರ, 6 ರಿಂದ 10ನೇ ತರಗತಿಯಲ್ಲಿ ಗುರುಪ್ರಸಾದ ಸವಣೂರು ಅವರಿಗೆ ಆದರ್ಶ ವಿದ್ಯಾರ್ಥಿಗಳು ಎಂದು ಆಯ್ಕೆ ಮಾಡಿ ಬಹುಮಾನ ನೀಡಲಾಯಿತು.
ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ, ಮುಖ್ಯಾಧ್ಯಾಪಕ ಮಹಾಂತೇಶ ಮಠಪತಿ, ಸಹ ಮುಖ್ಯಾಧ್ಯಾಪಕಿ ಪದ್ಮಾವತಿ ಜೈನರ, ಶಿಕ್ಷಕ ಎನ್.ಎಂ. ಜಂತಲಿ, ರೇಖಾ ಅಂಬೇಕರ, ಪಾರ್ವತಿ ದಂಡಿನ, ಶಿಕ್ಷಕರು, ಇತರರು ಇದ್ದರು.
ರೇಖಾ ಯಲಿಗಾರ ಸ್ವಾಗತಿಸಿದರು. ಮಂಜುಳಾ ಹಂಪಣ್ಣವರ ನಿರೂಪಿಸಿದರು. ಪೂರ್ಣಿಮಾ ದೊಡ್ಡಮನಿ ವಂದಿಸಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.