ಕನಕಪುರ : ಹೆಚ್ಚಿನ ಅಂಕಗಳಿಕೆಗಾಗಿ ಮಕ್ಕಳ ಮೇಲೆ ಒತ್ತಡ ಹಾಕುತ್ತಿದ್ದಾರೆ, ಹೊರತು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಸನ್ಮಾರ್ಗದಲ್ಲಿ ನಡೆಯುವ ನಿಟ್ಟಿನಲ್ಲಿ ಪಾಲಕರು ಆದ್ಯತೆ ನೀಡಬೇಕು ಎಂದು ಕನಕಪುರದ ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಎಸ್.ಎನ್. ಮಾಂಟೆಸ್ಸರಿ ಹೌಸ್ ಆಫ್ ಚಿಲ್ಡ್ರನ್ ಶಾಲೆಯ ಎಂ3 ಮಕ್ಕಳ ಘಟಿಕೋತ್ಸವವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಜ್ಞಾನಗಳಿಕೆಗಾಗಿ ಶಿಕ್ಷಣ ಪಡೆಯಬೇಕು, ಆದರೆ, ಬದುಕಿನ ಶಿಕ್ಷಣಕ್ಕೆ ಮೌಲ್ಯಾಧಾರಿತ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಮಕ್ಕಳು ಜ್ಞಾನದ ಜತೆಗೆ ಸಮಾಜದಲ್ಲಿ ಸತ್ಪ್ರಜೆಗಳಾಗಿ ಸನ್ಮಾರ್ಗದಲ್ಲಿ ಮುನ್ನಡೆಯುತ್ತಾರೆ. ಭಾರತ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ವಿಶ್ವದಲ್ಲಿ ಮೇರುತ್ವ ಸಾಧಿಸಿದೆ, ಇದೇ ದಾರಿಯಲ್ಲಿ ವಿದ್ಯಾರ್ಥಿಗಳು ಸಾಗಬೇಕು, ಆಗ ಭಾರತ ಮತ್ತಷ್ಟು ಬಲಾಢ್ಯವಾಗಲಿದೆ ಎಂದರು.
ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಕ್ಷಣಾರ್ಧದಲ್ಲಿ ಮಾಹಿತಿ ಸಿಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅಥವಾ ಇನ್ನಿತರ ಸಾಧನಗಳನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಮಕ್ಕಳನ್ನು ಸಮಾಜದ ಆಸ್ತಿಯಾಗಿ ಮಾಡಿ ಎಂದು ಪಾಲಕರಿಗೆ ಕರೆ ನೀಡಿದರು.
ಸುನಿಲ್‌ಕೃಷ್ಣ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕೆಲಸ ಶಿಕ್ಷಕರಿಂದ ಆಗಬೇಕು, ಪ್ರತಿ ಮಕ್ಕಳಲ್ಲಿರುವ ಪ್ರತಿಭೆ ಇರುತ್ತದೆ, ಅದನ್ನು ಹೆಕ್ಕಿ ತೆಗೆಯುವ ಕೆಲಸವಾದರೆ ಮಾತ್ರ ಮಕ್ಕಳನ್ನು ಆಯಾಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಎಸ್.ಎನ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಮಮತಾಶ್ರೀ ಮಾತನಾಡಿ, ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿದರೆ ಮಾತ್ರ ಸಮಾಜ, ಕುಟುಂಬ ಹಾಗೂ ದೇಶದ ಬಗೆ ಗೌರವ ಹೊಂದುತ್ತಾರೆ, ಇದಕ್ಕೆ ಪೂರಕವಾಗಿ ನಾವು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ ಎಂದರು.
ದೀಪಾ ಸುನಿಲ್‌ಕೃಷ್ಣ ಮಕ್ಕಳ ಸಾಮರ್ಥ್ಯದ ಬಗೆ ಮಾತನಾಡಿದರು. ಮಕ್ಕಳಿಂದ ಪ್ರತಿಭಾ ಪ್ರದರ್ಶನಗಳು ನಡೆಯಿತು.
ಶಿಕ್ಷಕಿಯರಾದ ಕುಮುದಾ ಹಾಗೂ ಅನಾಟ ಇದ್ದರು.