ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಾದೇಶಿಕ ವಿಜ್ಞಾನ ಕೇಂದ್ರ ಉತ್ತರ ಕರ್ನಾಟಕದ ಹೆಮ್ಮೆಯ ಕನಸಿನ ಕೂಸು. ನಾನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವನಾಗಿದ್ದಾಗ ಮಂಜೂರಾತಿ ಪಡೆದ ಸಂಸ್ಥೆ. ಈ ಕೇಂದ್ರದಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಯ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಪ್ರಮುಖ ಹಾಗೂ ಉಪಯುಕ್ತ ತರಬೇತಿ ನೀಡಲಾಗುತ್ತಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರ, ಅವ್ವ ಸೇವಾ ಟ್ರಸ್ಟ್ ಮತ್ತು ಕರ್ನಾಟಕ ರಾಜ್ಯ ಗಣಿತ ಪರಿಷತ್ ಆಶ್ರಯದಲ್ಲಿ ಗುರವ್ವ ಶಿವಲಿಂಗಪ್ಪ ಹೊರಟ್ಟಿ ದತ್ತಿ ನಿಮಿತ್ತ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರೌಢಶಾಲಾ ಶಿಕ್ಷಕರಿಗೆ ವಿಜ್ಞಾನ ಹಾಗೂ ಗಣಿತ ಬೋಧನೆಯಲ್ಲಿ ಸೃಜನಾತ್ಮಕ ಕಲಿಕೆ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಅಕಾಡೆಮಿ ವಿಶ್ರಾಂತ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ ಮಾತನಾಡಿ, ವರ್ಗ ಕೋಣೆಯಲ್ಲಿ ಮುಂದಿನ 15 ವರ್ಷದಲ್ಲಿ ಆಗಲಿರುವ ಬದಲಾವಣೆಗೆ ತಕ್ಕಂತೆ ಶಿಕ್ಷಕರು ಡಿಜಿಟಲ್ ತಂತ್ರಜ್ಞಾನ ಮೂಲಕ ಪಾಠ ಬೋಧನೆ ಕೈಗೊಳ್ಳಬೇಕು. ಶಿಕ್ಷಕರು ತಮ್ಮ ಕರ್ತವ್ಯ, ಜವಾಬ್ದಾರಿಗಿಂತ ತಮಗೆ ಸಿಕ್ಕ ಅವಕಾಶವನ್ನು ಪ್ರೀತಿಯಿಂದ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಹೃದಯಕ್ಕೆ ಮುಟ್ಟುವುಂತೆ ಪಾಠ ಬೋಧನೆ ಮಾಡಬೇಕು ಎಂದರು.
ಡಾ. ಆನಂದ ಪಾಂಡುರಂಗಿ ಮಾತನಾಡಿ, ಮಕ್ಕಳಿಗೆ ಮನಮುಟ್ಟುವಂತೆ ಕಲಿಸುವುದು ಶಿಕ್ಷಕರ ಜವಾಬ್ದಾರಿ. ಮಕ್ಕಳಿಗೆ ಮೊಬೈಲ್ ನೀಡಿದರೆ ತಪ್ಪಿಲ್ಲ. ಆದರೆ ಅದರಲ್ಲಿ ಯಾವ ವಿಷಯವನ್ನು ಎಷ್ಟು ಬಳಸಬೇಕು ಹಾಗೂ ಯಾವುದನ್ನು ಬಳಸಬಾರದು, ಎಷ್ಟು ಸಮಯ ಬಳಸುವುದು ಸೂಕ್ತ ಎಂಬುದನ್ನು ಪಾಲಕರು ಪರಿಶೀಲಿಸಿ ಮಕ್ಕಳನ್ನು ಜಾಗೃತಗೊಳಿಸಿದಲ್ಲಿ ಅದರಿಂದ ಲಾಭವಿದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸುಮಂಗಲಾ ದಾಂಡೇವಾಲೆ ಉಪನ್ಯಾಸ ನಿಡಿದರು. ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂಧಗಿ, ಗಣಿತ ಪರಿಷತ್ ಅಧ್ಯಕ್ಷ ಬಿ.ಎಸ್. ಪಾಟೀಲ, ಕೋಶಾಧ್ಯಕ್ಷ ಬಿ.ಜಿ. ಬಶೆಟ್ಟಿ, ಸಂಜಯ ಮಾಳಿ, ಯಲ್ಲಪ್ಪ ಭಜಂತ್ರಿ, ಎಸ್.ಎಫ್. ಆಡಿನ, ಅಡಿವೆಪ್ಪ ಅಂತಣ್ಣವರ, ಎಂ.ಸಿ. ಕಂದಗಲ್, ಶಶಿಧರ ಬಿ., ಶ್ಯಾಮ್ ತೇಲಗಾರ, ಕೆ.ಎನ್. ಲಕ್ಷ್ಮಣ, ಎಸ್.ಎಫ್. ಮಾದರ, ಎಸ್.ವಿ. ಹಿರೇಮಠ, ಜಿ.ಆರ್ ಭಟ್ಟ, ವಿಜ್ಞಾನ, ಗಣಿತ ಶಿಕ್ಷಕರು, ಇತರರು ಇದ್ದರು.
ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶಾಲಾಕ್ಷಿ ಎಸ್.ಜೆ. ನಿರೂಪಿಸಿದರು. ಆರ್.ಎಸ್. ದೇಶಪಾಂಡೆ ವಂದಿಸಿದರು.