ಜಿಲ್ಲೆ

ಸ್ವಾವಲಂಬಿ ಜೀವನಕ್ಕಾಗಿ ಚಹಾ ಮಾರಾಟ

Dakshina Kannada

ಕಡಬ: ಕರೊನಾ ಮಹಾಮಾರಿ, ಲಾಕ್‌ಡೌನ್ ಬಹುತೇಕ ಯುವಕರಿಗೆ ಜೀವನ ಪಾಠ ಕಲಿಸಿದೆ. ದೂರದೂರಿನಲ್ಲಿ ದುಡಿಯುತ್ತಿದ್ದ ಅನೇಕ ಯುವಕರು ಮತ್ತೆ ಹಳ್ಳಿಗೆ ಮರಳಿ ಕೃಷಿ ಇನ್ನಿತರ ಕಾಯಕಗಳಲ್ಲಿ ತೊಡಗಿ ಸ್ವಾಲಂಬಿಗಳಾಗಿದ್ದಾರೆ. ಅಂತೆಯೇ ಕಡಬ ತಾಲೂಕು ಹೊಸಮಠ ಎಂಬಲ್ಲಿನ ಯುವಕ ಕರೊನಾ ಕಾರಣಕ್ಕಾಗಿ ವಿದೇಶದಲ್ಲಿದ್ದ ಉದ್ಯೋಗ ಬಿಟ್ಟು ಬಂದು ಕಡಬ ಪೇಟೆಯಲ್ಲಿ ಚಾಯ್‌ವಾಲಾನಾಗಿ ಬದುಕು ಕಟ್ಟಿಕೊಂಡಿದ್ದಾರೆ.

ಹೊಸಮಠ ಕಕ್ಕೆನಡ್ಕ ದಯಾನಂದ ಗೌಡರ ಪುತ್ರ ಶಿವಪ್ರಸಾದ್ ಗೌಡ ವಿದೇಶದ ಉದ್ಯೋಗ ತೊರೆದು ಊರಿಗೆ ಆಗಮಿಸಿ ಕಡಬ ಪೇಟೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಅಂಗಡಿ, ಕಚೇರಿಗಳಿಗೆ ತೆರಳಿ ಚಾ, ತಿಂಡಿ ಮಾರಾಟ ಮಾಡಿ ಬದುಕು ಕಟ್ಟಿಕೊಟ್ಟಿದ್ದಾರೆ. ಬೆಳಗ್ಗೆ ಹತ್ತೂವರೆ ಹಾಗೂ ಸಂಜೆ ಮೂರುವರೆಗೆ ಶಿವಪ್ರಸಾದ್ ದ್ವಿಚಕ್ರ ವಾಹನದಲ್ಲಿ ಎರಡು ಚೀಲಗಳನ್ನು ಹಿಡಿದು ಪ್ರತ್ಯಕ್ಷರಾಗುತ್ತಾರೆ. ಒಂದು ಡಬ್ಬದಲ್ಲಿ ಚಾ, ಕಾಫಿ ಇನ್ನೊಂದರಲ್ಲಿ ಬಿಸಿಬಿಸಿ ವಿವಿಧ ತಿಂಡಿಗಳಿರುತ್ತವೆ.

ಶಿವಪ್ರಸಾದ್ ಬಿಕಾಂ, ಕಂಪ್ಯೂಟರ್ ಸೈನ್ಸ್ ಪದವೀಧರ. ಕಂಪ್ಯೂಟರ್ ಹಾರ್ಡ್‌ವೇರ್ ನೆಟ್‌ವರ್ಕ್ ಅನುಭವಿಯಾಗಿರುವ ಈತ ಪದವಿ ಮುಗಿದ ಬಳಿಕ ಉದ್ಯೋಗ ಅರಸಿಕೊಂಡು ವಿದೇಶಕ್ಕೆ ಹಾರಿ ದುಬೈನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಕೈತುಂಬಾ ಸಂಬಳ ಕೂಡ ಇತ್ತು. ಉದ್ಯೋಗಕ್ಕೆ ಸೇರಿ ಮೂರು ತಿಂಗಳಾಯಿತು ಎನ್ನುವಷ್ಟರಲ್ಲಿ ಕರೊನಾ ಮಹಾಮಾರಿಯ ಭೀಕರತೆ ಜಗತ್ತಿನಾದ್ಯಂತ ಕೇಕೆ ಹಾಕಿತು. ಇದರಿಂದ ಉದ್ಯೋಗ ಬಿಟ್ಟು ಊರಿಗೆ ಹೊರಡುವ ಅನಿವಾರ್ಯತೆ ನಿರ್ಮಾಣವಾಯಿತು.

ಆರು ತಿಂಗಳ ಹಿಂದೆ ಊರಿಗೆ ಮರಳಿದ ಶಿವಪ್ರಸಾದ್ ಲಾಕ್‌ಡೌನ್ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಸುಮ್ಮನೆ ಕೂರಲಿಲ್ಲ. ಶಿವಪ್ರಸಾದ್ ಕುಟುಂಬಕ್ಕೆ ಹೊಸಮಠದಲ್ಲಿ ಸಣ್ಣ ಕ್ಯಾಂಟಿನ್ ಇದೆ. ಇದಕ್ಕೆ ಅರ್ಧ ಶತಮಾದ ಇತಿಹಾಸವಿದ್ದು, ಶಿವಪ್ರಸಾದ್ ಅವರ ಅಜ್ಜನ ಕಾಲದಿಂದಲೂ ಈ ಕ್ಯಾಂಟಿನ್ ಇದೆ. ಅಜ್ಜ, ತಂದೆ ಅವರು ಕ್ಯಾಂಟಿನ್ ನಡೆಸಿದ ಬಳಿಕ ಈಗ ಶಿವಪ್ರಸಾದ್ ಅದರ ಜವಾಬ್ದಾರಿ ಹೊತ್ತಿದ್ದಾರೆ. ವಿದೇಶದಿಂದ ಮರಳಿ ಲಾಕ್‌ಡೌನ್ ಅಂತ್ಯವಾದ ಬೆನ್ನಲ್ಲೇ ಶಿವಪ್ರಸಾದ್ ಕ್ಯಾಂಟಿನ್ ಜವಾಬ್ದಾರಿ ಹೊತ್ತು ಹೋಟೆಲ್ ನಡೆಸುವುದರೊಂದಿಗೆ ಚಾಯ್‌ವಾಲನಾಗಿ ಪ್ರವರ್ಧಮಾನಕ್ಕೆ ಬಂದಿದ್ದಾರೆ.

ವಿದೇಶದಲ್ಲಿ ಕೈತುಂಬಾ ಸಂಬಳ ಪಡೆಯುತ್ತಿದ್ದ ಈ ಯುವಕನಿಗೆ ಚಹಾ ಮಾರಿ ಜೀವನ ನಡೆಸಲು ಯಾವುದೇ ಮುಜುಗರವಿಲ್ಲ. ಏನಿಲ್ಲವೆಂದರೂ ಎಲ್ಲ ಖರ್ಚುವೆಚ್ಚ ಕಳೆದು ದಿನದಲ್ಲಿ ಕನಿಷ್ಠ ಸಾವಿರ ರೂ. ಉಳಿಸುವ ಈ ಯುವಕ, ಮನೆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ನಾನು ವಿದೇಶದಿಂದ ಬಂದ ಬಳಿಕ ನನ್ನ ಹಿರಿಯರು ಹೊಸಮಠದಲ್ಲಿ ನಡೆಸಿಕೊಂಡು ಬರುತ್ತಿದ್ದ ಸಣ್ಣ ಕ್ಯಾಂಟಿನನ್ನು ಮುಂದುವರಿಸಲು ನಿರ್ಧರಿಸಿದೆ. ಅದರೊಟ್ಟಿಗೆ ಚಾಯ್‌ವಾಲನಾಗುವುದಕ್ಕೂ ನನಗೆ ಪ್ರೇರಣೆಯಾಗಿದೆ. ಈ ವೃತ್ತಿ ಮಾಡುವುದಕ್ಕೆ ನನಗೆ ಯಾವುದೇ ಕೀಳರಿಮೆಯಿಲ್ಲ. ಪದವಿಗಳು ನಮ್ಮ ದುಡಿಮೆಗೆ ಯಾವುತ್ತೂ ಅಡ್ಡಿಯಾಗಬಾರದು.

ಶಿವಪ್ರಸಾದ್ ಗೌಡ ಹೊಸಮಠ, ಚಾಯ್‌ವಾಲ