ಜಿಲ್ಲೆ

ರಸ್ತೆ ಅಗಲೀಕರಣ ಜಾಗಕ್ಕೆ ಟಿಡಿಆರ್ ವಿತರಣೆ: ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸ್ಪಷ್ಟನೆ

ಬೆಂಗಳೂರು: ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಕಡೆಗಳಲ್ಲಿ ಭೂಮಾಲೀಕರಿಗೆ ಟಿಡಿಆರ್‌ಅನ್ನು ಪರಿಹಾರ ರೂಪದಲ್ಲಿ ವಿತರಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಪಾಲಿಕೆಯ ರಸ್ತೆ ಮೂಲಸೌಕರ್ಯ ವಿಭಾಗವು ಕೈಗೆತ್ತಿಕೊಂಡಿರುವ ಕಾಮಗಾರಿಗಳ ಕುರಿತು ಬುಧವಾರ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ 16 ರಸ್ತೆಗಳಲ್ಲಿ ಕೈಗೆತ್ತಿಕೊಂಡಿರುವ ಅಗಲೀಕರಣ ಕಾರ್ಯದಲ್ಲಿ 2 ರಸ್ತೆಗಳಲ್ಲಿ ಸಂಪೂರ್ಣ ಅಗಲೀಕರಣ ಕಾರ್ಯವನ್ನು ಮುಕ್ತಾಯಗೊಳಿಸಲಾಗಿದೆ. ಟಿಡಿಆರ್ ಸಮಸ್ಯೆಯಿರುವ ರಸ್ತೆಗಳಲ್ಲಿ ಆಸ್ತಿ ಮಾಲಿಕರೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹೈಡೆನ್ಸಿಟಿ ಕಾರಿಡಾರ್ ಕಾಮಗಾರಿಗಳಿಗೆ ವೇಗ ನೀಡಿ:

ನಗರದ ಹೊರ ವರ್ತುಲ ರಸ್ತೆಗಳಲ್ಲಿ ಕೈಗೆತ್ತಿಕೊಂಡಿರುವ ಹೈಡೆನ್ಸಿಟಿ ಕಾರಿಡಾರ್‌ಗಳ ಕಾಮಗಾರಿ ಪ್ರಗತಿಯಲ್ಲಿದೆ. ಅವುಗಳಿಗೆ ವೇಗ ನೀಡಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಜತೆಗೆ ಜಂಕ್ಷನ್‌ಗಳ ಸಮಗ್ರ ಅಭಿವೃದ್ಧಿ ಮಾಡಿ ವಾಹನಗಳ ಸುಗಮ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಡಕು ಉಂಟಾಗದಂತೆ ವಿನ್ಯಾಸ ರೂಪಿಸಿ, ಕಾಲಮಿತಿಯೊಳಗಾಗಿ ಅಭಿವೃದ್ಧಿಪಡಿಸುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರಾದ ಕರೀಗೌಡ, ಡಾ. ಕೆ.ಹರೀಶ್ ಕುಮಾರ್, ಮುಖ್ಯ ಅಭಿಯಂತರ ಲೋಕೇಶ್, ಅಧೀಕ್ಷಕ ಅಭಿಯಂತರ ಹೇಮಲತಾ ಹಾಜರಿದ್ದರು.