ಜಿಲ್ಲೆ

ಎನ್ ಜಿ ಇ ಎಫ್ ನಲ್ಲಿ ಟಿಸಿ ಯಶಸ್ವಿ ಪರೀಕ್ಷೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನ್ಯೂ ಗವರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿಯ (ಎನ್ ಜಿ ಇಎಫ್) ಭಟಿಂದಾ (ಪಂಜಾಬ್) ಶಾಖೆಯಲ್ಲಿ ಉತ್ಪಾದನೆ ಮಾಡಿದ ವಿದ್ಯುತ್ ಪರಿವರ್ತಕಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಕೆಲವೇ ದಿನಗಳಲ್ಲಿ ಗುಜರಾತ್‌ನ ರೈಲ್ವೆ ಯೋಜನೆಗೆ ರವಾನೆಯಾಗಲಿವೆ.

ಭಾರತೀಯ ರೈಲ್ವೆಯ ಬೃಹತ್ ಯೋಜನೆಗೆ ಹೆಚ್ಚು ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳನ್ನು (ಟಿಸಿ) ಉತ್ಪಾದನೆ ಮಾಡಿ ಕೊಡುವ ಮೂಲಕ ಎನ್ ಜಿಇಎಫ್ ಹೊಸ ಸಾಧನೆ ಮಾಡಿದೆ. ಈ ಮೂಲಕ ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಸಜ್ಜಾಗಿದೆ.

ಗುಜರಾತ್‌ನ ದಹೋಡಾ ರೈಲ್ವೆ ಯೋಜನೆಗೆ ಬೇಕಾದ 14 ಟಿಸಿ ತಯಾರಿಸಿ ಕೊಡುವಂತೆ ಕೇಳಿಕೊಳ್ಳಲಾಗಿತ್ತು. ಅದರಂತೆ ಇಲ್ಲಿಯ ಎನ್ ಜಿಇಎಫ್ ಐದು ಟಿಸಿಗಳನ್ನು ತಯಾರಿಸಿ ಕೆಲ ತಿಂಗಳ ಹಿಂದೆ ಕಳುಹಿಸಿಕೊಟ್ಟಿತ್ತು. ಉಳಿದ 9 ಟಿಸಿಗಳನ್ನು ಪಂಜಾಬ್ ಘಟಕದಲ್ಲಿ ತಯಾರಿಸಲಾಗಿತ್ತು.

ಅವುಗಳನ್ನು ಮುಖ್ಯ ಕಚೇರಿ ಇರುವ ಹುಬ್ಬಳ್ಳಿ ಎನ್ ಜಿಇಎಫ್ ನಲ್ಲಿಯೇ ಪರೀಕ್ಷೆ ನಡೆಸಿ ಕಳುಹಿಸಲಾಗುತ್ತಿದೆ.

ಪಂಜಾಬ್ ನಿಂದ ಬಂದಿದ್ದ 9 ಟಿಸಿಗಳನ್ನು ಇದೀಗ ಪರೀಕ್ಷೆ ನಡೆಸಿ ಒಕೆ ಎಂದು ಪ್ರಮಾಣ ಪತ್ರ ನೀಡಲಾಗಿದೆ.

ಉತ್ತರ ಕರ್ನಾಟಕದ ಪ್ರಮುಖ ಸರ್ಕಾರಿ ಸ್ವಾಮ್ಯದ ಎನ್ ಜಿ ಇ ಎಫ್ ಸಂಸ್ಥೆಯು ಸ್ಥಾಪನೆಯಾಗಿ 23 ವರ್ಷ ಕಳೆದಿವೆ. ಇದೇ ಪ್ರಥಮ ಬಾರಿಗೆ ಅತ್ಯುನ್ನತ ದರ್ಜೆಯ ಹಾಗೂ ಹೆಚ್ಚು ಸಾಮರ್ಥ್ಯದ ಟಿಸಿ ಉತ್ಪಾದಿಸುವ ಮೂಲಕ ತನ್ನ ಹಿರಿಮೆ ಹೆಚ್ಚಿಸಿಕೊಂಡಿದೆ.

ಉತ್ಪಾದಿಸಿರುವ ಟಿಸಿಗಳನ್ನು ಗುಜರಾತ್ ಗೆ ಕಳುಹಿಸುವ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಸಿಬ್ಬಂದಿ ಸಜ್ಜಾಗಿದ್ದಾರೆ ಎಂದು ಎನ್ ಜಿ ಇ ಎಫ್ ಎಂಡಿ ಎಸ್.ಎಚ್. ನರೇಗಲ್ಲ ತಿಳಿಸಿದ್ದಾರೆ.